Venkatesha Stavaraja

ಶ್ರೀರಮಣ ಸರ್ವೇಶ ಸರ್ವಗ 
ಸಾರಭೋಕ್ತ ಸ್ವತಂತ್ರ ಸರ್ವದs
ಪಾರಮಹಿಮೋದಾರ ಸದ್ಗುಣಪೂರ್ಣಗಂಭೀರ |
ಸಾರಿದವರಘ ದೂರಗೈಸೀ 
ಸೂರಿಜನರಿಗೆ ಸೌಖ್ಯನೀಡುವ 
ಧೀರವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೧ ||

ಘನ್ನಮಹಿಮಾಪನ್ನ ಪಾಲಕ 
ನಿನ್ನ ಹೊರತಿನ್ನನ್ಯ ದೇವರ
ಮನ್ನದಲಿನ ನಾ ನೆನೆಸೆನೆಂದಿಗೂ ಬನ್ನ ಬಡಿಸದಿರೂ |
ಎನ್ನ ಪಾಲಕ ನೀನೆ ಇರುತಿರೆ
ಇನ್ನು ಭವಭಯವೇಕೆ ಎನಗೆ
ಚನ್ನವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೨ ||

ಲಕುಮಿ ಬೊಮ್ಮ ಭವಾಮರೇಶರು 
ಭಕುತಿಪೂರ್ವಕ ನಿನ್ನ ಭಜಿಸೀ
ಸಕಲಲೋಕಕೆ ನಾಥನೆನಿಪರೊ ಸರ್ವಕಾಲದಲಿ |
ನಿಖಿಳಜೀವರ ಪೊರೆವೊ ದೇವನೆ
ಭಕುತಿ ನೀಯೆನಗೀಯದಿರಲು
ವ್ಯಕುತವಾಗ್ಯಪಕೀರ್ತಿ ಬಪ್ಪುದೊ ಶ್ರೀನಿಕೇತನನೆ || ೩ ||

ಯಾಕೆ ಪುಟ್ಟದೊ ಕರುಣ ಎನ್ನೊಳು
ಸಾಕಲಾರೆಯ ನಿನ್ನ ಶರಣನ 
ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ ? |
ನೋಕನೀಯನೇ ನೀನೆ ಎನ್ನನು 
ಜೋಕೆಯಿಂದಲಿ ಕಾಯೊ ಬಿಡದೆ 
ಏಕದೇವನು ನೀನೆ ವೇಂಕಟ ಶೇಷಗಿರಿವಾಸ || ೪ ||

ಅಂಬುಜಾಂಬಕ ನಿನ್ನ ಪದಯುಗ
ನಂಬಿಕೊಂಡೀ ಪರಿಯಲಿರುತಿರೆ
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿತೋರೆ |
ಬಿಂಬಮೂರುತಿ ನಿನ್ನ ಕರಗತ 
ಕಂಬುವರವೇ ಗತಿಯೊ ವಿಶ್ವ
ಕುಟುಂಬಿ ಎನ್ನನು ಸಲಹೊ ಸಂತತ ಶೇಷಗಿರಿವಾಸ || ೫ ||

ಸಾರಶಿರಿವೈಕುಂಠ ತ್ಯಜಿಸೀ
ಧಾರುಣೀಯೊಳು ಗೊಲ್ಲನಾಗಿ
ಚೋರಕರ್ಮವ ಮಾಡಿ ಬದುಕಿದ ದಾರಿಗರಿಕಿಲ್ಲ |
ಸಾರಿಪೇಳುವೆ ನಿನ್ನ ಗುಣಗಳ
ಪಾರವಾಗಿರುತಿಹವೊ ಜನರಿಗೆ 
ಧೀರವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೬ ||

ನೀರ ಮುಳುಗೀ ಭಾರಪೊತ್ತೂ 
ಧಾರುಣೀತಳವಗೆದು ಸಿಟ್ಟಿಲಿ
ಕ್ರೂರನುದರವ ಶೀಳಿ ಕರುಳಿನ ಮಾಲೆ ಧರಿಸಿದರು |
ಪೋರ ವಿಪ್ರ ಕುಠಾರಿ ವನವನ
ಚಾರಿ ಗೋಪ ದಿಗಂಬರಾಶ್ವವ 
ಏರಿ ಪೋದರು ಬಿಡೆನೊ ವೇಂಕಟಶೇಷಗಿರಿವಾಸ || ೭ ||

ಲಕ್ಷ್ಮಿನಾಯಕ ಸಾರ್ವಭೌಮನೆ 
ಪಕ್ಷಿವಾಹನ ಪರಮಪುರುಷನೆ 
ಮೋಕ್ಷದಾಯಕ ಪ್ರಾಣಜನಕನೆ ವಿಶ್ವವ್ಯಾಪಕನೆ |
ಅಕ್ಷಯಾಂಬರವಿತ್ತಿ ವಿಜಯನ 
ಪಕ್ಷಪಾತವ ಮಾಡಿ ಕುರುಗಳ
ಲಕ್ಷ್ಯಮಾಡದೆ ಕೊಂದೆಯೋ ಶ್ರೀಶೇಷಗಿರಿವಾಸ || ೮ ||

ಹಿಂದೆ ನೀ ಪ್ರಹ್ಲಾದ ಗೋಸುಗ
ಎಂದು ನೋಡದ ರೂಪಧರಿಸೀ
ಬಂದು ದೈತ್ಯನ ಒಡಲ ಬಗೆದೂ ಪೊರೆದೆ ಬಾಲಕನ |
ತಂದೆತಾಯ್ಗಳ ಬಿಟ್ಟು ವಿಪಿನದಿ
ನಿಂದು ತಪಿಸುವ ಪಂಚವತ್ಸರ
ಕಂದನಾ ಧ್ರುವಗೊಲಿದು ಪೊರೆದೆಯೋ ಶೇಷಗಿರಿವಾಸ || ೯ ||

ಮಡುವಿನೊಳಗಿಹ ಮಕರಿಕಾಲನು 
ಪಿಡಿದು ಬಾಧಿಸೆ ಕರಿಯು ತ್ರಿಜಗ
ದ್ವಡೆಯ ಪಾಲಿಸೊ ಎನಲು ತಕ್ಷಣ ಬಂದು ಪಾಲಿಸಿದೆ | 
ಮಡದಿಮಾತನು ಕೇಳಿ ಬಲುಪರಿ 
ಬಡವಬ್ರಾಹ್ಮಣ ಧಾನ್ಯಕೊಡಲು
ಪೊಡವಿಗಸದಳ ಭಾಗ್ಯ ನೀಡಿದೆ ಶೇಷಗಿರಿವಾಸ || ೧೦ ||

ಪಿಂತೆಮಾಡಿದ ಮಹಿಮೆಗಳ ನಾ
ನೆಂತು ವರ್ಣಿಸಲೇನುಫಲ ಶ್ರೀ
ಕಾಂತ ಎನ್ನನು ಪೊರೆಯೆ ಕೀರುತಿ ನಿನಗೆ ಫಲವೆನಗೆ | 
ಕಂತುಜನಕನೆ ಎನ್ನ ಮನಸಿನ 
ಅಂತರಂಗದಿ ನೀನೆ ಸರ್ವದ 
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ || ೧೧ ||

ಶ್ರೀನಿವಾಸನೆ ಭಕ್ತಪೋಷನೆ 
ಜ್ಞಾನಿಕುಲಗಳಿಗಭಯದಾಯಕ
ದೀನಬಾಂಧವ ನೀನೆ ಎನ್ನಮನದರ್ಥ ಪೂರೈಸೊ |
ಅನುಪಮೋಪಮಜ್ಞಾನ ಸಂಪದ 
ವಿನಯಪೂರ್ವಕವಿತ್ತು ಪಾಲಿಸೊ
ಜನುಮಜನುಮಕೆ ಮರೆಯಬೇಡವೋ ಶೇಷಗಿರಿವಾಸ || ೧೨ ||

ಮದವು ಮತ್ಸರ ಲೋಭ ಮೋಹವು
ಒದಗಬಾರದು ಎನ್ನ ಮನದಲಿ 
ಪದುಮನಾಭನೆ ಜ್ಞಾನ ಭಕ್ತಿ ವಿರಕ್ತಿ ನೀನಿತ್ತು |
ಹೃದಯಮಧ್ಯದಿ ನಿನ್ನ ರೂಪವು 
ವದನದಲಿ ತವ ನಾಮಮಂತ್ರವು
ಸದಯ ಪಾಲಿಸೊ ಬೇಡಿಕೊಂಬೆನೊ ಶೇಷಗಿರಿವಾಸ || ೧೩ ||

ಅಂದನುಡಿ ಪುಸಿಯಾಗಬಾರದು
ಬಂದ ಭಾಗ್ಯವು ಹೋಗಬಾರದು 
ಕುಂದು ಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ |
ನಿಂದೆ ಮಾಡುವ ಜನರ ಸಂಗವು
ಎಂದಿಗಾದರು ದೊರೆಯ ಬಾರದು
ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ || ೧೪ ||

ಏನು ಬೇಡಲಿ ಎನ್ನ ದೇವನೆ 
ಸಾನುರಾಗದಿ ಎನ್ನ ಪಾಲಿಸೊ 
ನಾನಾವಿಧವಿಧ ಸೌಖ್ಯ ನೀಡು ಇಹಪರಂಗಳಲಿ | 
ಶ್ರೀನಿವಾಸನೆ ನಿನ್ನ ದಾಸಗೆ 
ಏನುಕೊರೆತಿಲ್ಲೆಲ್ಲಿ ನೋಡಲು
ನೀನೆ ನಿಂತೀವಿಧದಿ ಪೇಳಿಸು ಶೇಷಗಿರಿವಾಸ || ೧೫ ||

ಆರುಮುನಿದವರೇನು ಮಾಳ್ಪರೊ 
ಆರುವೊಲಿದವರೇನು ಮಾಳ್ಪರೊ
ಆರು ಸ್ನೇಹಿಗರಾರು ದ್ವೇಷಿಗಳಾರುದಾಶಿನರು |
ಕ್ರೂರ ಜೀವರ ಹಣಿದು ಸಾತ್ವಿಕ
ಧೀರ ಜೀವರ ಪೊರೆದು ನಿನ್ನಲಿ
ಸಾರ ಭಕುತಿಯನಿತ್ತುಪಾಲಿಸೋ ಶೇಷಗಿರಿವಾಸ || ೧೬ ||

ನಿನ್ನ ಸೇವೆಯನಿತ್ತು ಎನಗೇ
ನಿನ್ನ ಪದಯುಗ ಭಕ್ತಿ ನೀಡೀ
ನಿನ್ನ ಗುಣ ಗಣ ಸ್ತವನ ಮಾಡುವ ಜ್ಞಾನ ನೀನಿತ್ತು |
ಎನ್ನ ಮನದಲಿ ನೀನೆ ನಿಂತೂ
ಘನ್ನ ಕಾರ್ಯವ ಮಾಡಿ ಮಾಡಿಸು
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ || ೧೭ ||

ಜಯ ಜಯತು ಶಠ ಕೂರ್ಮ ರೂಪನೆ
ಜಯ ಜಯತು ಕಿಟಿ ಸಿಂಹ ವಾಮನ
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ |
ಜಯ ಜಯತು ಶಿರಿ ಯದುವರೇಣ್ಯನೆ 
ಜಯ ಜಯತು ಜನಮೋಹ ಬುದ್ಧನೆ 
ಜಯ ಜಯತು ಕಲಿಕಲ್ಮಷಘ್ನನೆ ಕಲ್ಕಿನಾಮಕನೆ || ೧೮ ||

ಕರುಣ ಸಾಗರ ನೀನೆ ನಿಜಪದ 
ಶರಣವತ್ಸಲ ನೀನೆ ಶಾಶ್ವತ 
ಶರಣಜನ ಮಂದಾರ ಕಮಲಾಕಾಂತ ಜಯವಂತ |
ನಿರುತ ನಿನ್ನನು ನುತಿಸಿ ಪೇಡುವೆ
ವರದ ಗುರುಜಗನ್ನಾಥವಿಠ್ಠಲ
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ || ೧೯ ||

Comments

Popular posts from this blog

Subrahmanya Shashti

Rathasaptami

Helavanakatte Giriyamma