Apattu Parihara Ugaboghagalu

ಮೊದಲಕಲ್ಲು ಶ್ರೀಶೇಷದಾಸರ ಆಪತ್ತು ಪರಿಹಾರ ಉಗಾಭೋಗಗಳು 
ಈ ಮೂರು ಉಗಾಭೋಗಗಳು ಕಲ್ಲೂರು ಕೃಷ್ಣಪ್ಪನ ಮೇಲೆ ಆಪತ್ತು ಬಂದಾಗ ಪ್ರಾರ್ಥನಾ ಮಾಡಿ ರಚಿಸಿದ್ದು. 

ಭಕ್ತವತ್ಸಲನೆಂಬ ಬಿರಿದುಳ್ಳ ದೇವ ನಿನ್ನ
ಭಕುತಿಯಿಂದಲಿ ನಮಿಸಿ ಬಿನ್ನೈಸುವೆ 
ರಿಕತನ್ನ ಬಿನ್ನಪವ ಮನಕತಂದು ವೇಗ ಆ-
ಸಕುತಿಯಿಂದಲಿ ಗ್ರಹಿಸಿ ಸಫಲ ಮಾಡೋ 
ಭಕುತನಾದ ಇವಗೆ ಲೌಕಿಕದಿಂದ ಬಂದ
ವಿಕಟರೂಪವಾದ ದುರಿತದಿಂದ 
ಮುಕುತನ್ನ ಮಾಡುವದು ಕರುಣದಿಂದಲಿ ವೇಗ
ಶಕಟಭಂಜನ ಕೃಷ್ಣ ಉತ್ಕೃಷ್ಟನು
ಮುಕುತಿದಾಯಕ ಗುರುವಿಜಯವಿಠಲ 
ಮಮದ್ಭಕ್ತನ ಪ್ರಾಣ ಪ್ರೀತಿ ಎಂಬೋದು ಸತ್ಯಮಾಡೊ॥

ಭಕ್ತರ ಮನೋರಥ ಪೂರ್ಣಮಾಡುವಲ್ಲಿ
ಉತ್ಕೃಷ್ಟವಾದ ಕಾಮಧೇನು ಎನಿಪೆ
ಭಕ್ತರ ಅಪರಾಧ ಸಹನ ಮಾಡುವಲ್ಲಿ ಧಾ-
ರಿತ್ರಿಗೆ ಸಮಾನನೆನಿಪ ಸಾರ್ವಭೌಮ 
ಭಕ್ತರಮ್ಯಾಲೆ ಮಹ ಕರುಣ ಮಾಡುವಲ್ಲಿ 
ಪಿತೃ ಮಾತೃ ಭ್ರಾತೃ ಗುರು ಸಮಾನನೆನಿಪೆ
ಭಕ್ತರ ಅಭಿಮಾನ ಸಹನಮಾಡುವಲ್ಲಿ
ಮಿತ್ರನೆನಿಸಿಕೊಂಬೆ ಅನಿಮಿತ್ತ ಬಂಧು
ಭಕ್ತರ ದುರಿತ ಕಳೆದು ಕಾವ ವಿಷಯದಲ್ಲಿ
ಛತ್ರನೆನಿಪ ಸತತ ಸನ್ಮಂಗಳಾಗ
ಭಕ್ತರ ನಿಂದಕರ ನಿಗ್ರಹ ಮಾಡುವಲ್ಲಿ
ಮೃತ್ಯು ಯಮಗೆ ಸದೃಶನೆನಿಪದೇವ 
ಭೃತ್ಯವತ್ಸಲ ಗುರುವಿಜಯವಿಠಲರೇಯ 
ಭಕ್ತರ ಪೊರೆವ ಬಿರಿದು ನಿನ್ನದಯ್ಯ॥

ಶತ್ರು ಮಿತ್ರಗಳಲ್ಲಿ ಸಮಸ್ಥಿತನಾಗಿ ನೀನೆ
ಪ್ರಕೃತಿಯು ಜೀವಕಾಲ ಅನುಸರಿಸೀ
ಕೃತ್ಯವಮಾಳ್ಪನಾಗಿ ಜೀವರ್ಗೆ ಸುಖ ದುಃಖ
ಮೊತ್ತಗಳುಣಿಸುವಿ ನಿಯಮದಂತೆ
ಕರ್ತೃನೆಂದು ನಿನ್ನ ನೆರೆನಂಬಿ ಇಪ್ಪವರಿಗೆ ಇದು
ಕೃತ್ಯಗಳಲ್ಲವೆಂದು ಶಾಸ್ತ್ರಸಿದ್ಧ
ಚಿತ್ತಕ್ಕೆ ತಂದು ವೇಗ ಶತ್ರುಸಹಸವನ್ನು
ವ್ಯರ್ಥಮಾಡಿ ಭಕ್ತನಾದವನ 
ಹತ್ತಲಿ ಕರೆದು ದಯದೃಷ್ಟಿಯಿಂದಲಿ ನೋಡಿ
ಉತ್ತಮವಾದ ಸುಖವೈದಿಪದೊ
ಭಕ್ತವತ್ಸಲ ಗುರುವಿಜಯವಿಠಲ ರೇಯ
ಎತ್ತಲಿದ್ದರು ನಿನ್ನ ಪೊಂದಿದವನು॥

Comments

Popular posts from this blog

Subrahmanya Shashti

Rathasaptami

Helavanakatte Giriyamma