Varadendra Teertharu


ಶ್ರೀ ಶ್ರೀ ವರದೇಂದ್ರತೀರ್ಥರು

ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ‌ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಇತಿಹಾಸದಲ್ಲಿ ಶ್ರೀ ವರದೇಂದ್ರಸ್ವಾಮಿಗಳ ಹೆಸರು ಬಹಳ ಪ್ರಖ್ಯಾತವಾದದ್ದು. ಇವರು ಮಹಾನ್‌ ಪಂಡಿತರು.ಪ್ರಸಿದ್ದ ವಾದಿದಿಗ್ವಿಜಯಿಗಳು.ಇವರ ಕಾಲದಲ್ಲಿ ಸಂಸ್ಥಾನವು ಸರ್ವವಿಧದಿಂದಲೂ ಅತ್ಯುನ್ನತ ಸ್ಥಿತಿಗೆ ಬಂದಿತು.ಶ್ರೀಗಳವರ ವ್ಯಕ್ತಿತ್ವ ಬಹಳ ಪ್ರತಿಭಾಪೂರ್ಣವಾದದ್ದು.

ಶ್ರೀಗಳವರು ದಕ್ಷಿಣಭಾರತದಲ್ಲೆಲ್ಲ ಸಂಚಾರ ಕೈಗೊಂಡರು. ಇವರ ದಕ್ಷಿಣ ದೇಶದ ಪ್ರವಾಸದಲ್ಲಿ 1774ರಲ್ಲಿ ಸೋಮರಾಜ ಎಂಬುವ ನಾಯಕ ಜಯದ ಸಂವತ್ಸರದ ಆಶ್ವಯುಜ ಶುದ್ಧ ಬಿದಿಗೆಯ ದಿನ ಅನೇಕ‌ ಭೂಮಿಗಳನ್ನು ಕೊಟ್ಟು ಕೃತಾರ್ಥನಾದ.

1769 ರಲ್ಲಿ ವೀರವೆಂಕಟ ತಿರುಮಲರಾಯ ಮತ್ತು ಬಲಾಸತ್‌ಜಂಗ್ ಬಹದೂರ್ ಮೊದಲಾದವರಿಂದ ಶ್ರೀಗಳವರು ಢಾಣಾಪುರ ಮೊದಲಾದ ಗ್ರಾಮಗಳನ್ನು ಪಡೆದರು. ಶ್ರೀಗಳವರು ಲೌಕಿಕದಲ್ಲಿ ಹೇಗೆ ದಕ್ಷರೋ ಹಾಗೆಯೇ ಉದ್ದಾಮ ಪಂಡಿತರೂ ಅಗಿದ್ದರು. ಚತುಃಶಾಸ್ತ್ರ ಪಂಡಿತರಾಗಿ ದಾಸಾಗ್ರಣಿಗಳೆಂದು ಪ್ರಖ್ಯಾರತಾದ ಶ್ರೀ ಜಗನ್ನಾಥದಾಸರು ಶ್ರೀಗಳವರಲ್ಲಿ ವ್ಯಾಸಂಗ‌ಮಾಡಿದವರು. ಶ್ರೀಗಳವರ ಸ್ತೋತ್ರ ರೂಪವಾಗಿ ಅವರು ವರದೇಂದ್ರ ಪಂಚರತ್ನಮಾಲಿಕೆ ಎಂಬ ಕವಿತೆಯನ್ನು ರಚಿಸಿದರು.

ಶ್ರೀಗಳವರು ದಾಸಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟರು.ಹಿಂದೆ ಚಂದ್ರಿಕಾಚಾರ್ಯರರ ಕಾಲದಲ್ಲಿ ಆ ಸಾಹಿತ್ಯ ಹೇಗೆ ಪೋಷಿತವಾಯಿತೋ ಹಾಗೆ ಈಗ ಇನ್ನೊಮ್ಮೆ  ದಾಸ ಸಾಹಿತ್ಯ ಪುನರುಜ್ಜೀವಿತವಾಯಿತು. ವಿಜಯದಾಸರು, ಗೋಪಾಲದಾಸರು, ಜಗನ್ನಾಥನದಾಸರುಗಳಂತಹ ಅಪರೋಕ್ಷ ಜ್ಞಾನಿಗಳು ಒಟ್ಟಾಗಿ ಸೇರಿದ್ದು ಶ್ರೀಗಳವರ ಕಾಲದಲ್ಲಿ.ಆ ದಾಸರಾಯರುಗಳು ಅನೇಕಸಲ ಸಂಸ್ಥಾನಕ್ಕೆ ಬಂದು ಗುರುಗಳ-ಮೂಲರಾಮದೇವರ ಅನುಗ್ರಹ ಪಡೆದು‌ ಹೋಗುತ್ತಿದ್ದರು. ಇಷ್ಟೇ ಅಲ್ಲದೆ ಶ್ರೀಗಳವರೇ ತಂತ್ರಸಾರವನ್ನು ಕನ್ನಡದಲ್ಲಿ ಪದರೂಪವಾಗಿ ರಚಿಸಿದ್ದಾರೆ.ಇದಕ್ಕೆ ಜಗನ್ನಾಥದಾಸರು ಫಲಸ್ತುತಿಯನ್ನು ಬರೆದಿದ್ದಾರೆ.ಎಲ್ಲಕ್ಕಿಂತ ಹೆಚ್ಚಾಗಿ ಶ್ರೀಗಳವರು ಜಗನ್ನಾಥದಾಸರ ಶಿಷ್ಯರಾದ ಪ್ರಾಣೇಶದಾಸರಲ್ಲಿ ವಿಶೇಷಾನುಗ್ರಹ‌ಮಾಡಿದರು.

ಸಂಚಾರತ್ವೇನ ಲಿಂಗಸೂಗೂರಿಗೆ ಹೋದ ಶ್ರೀಗಳವರಿಂದ ಚತುರ್ಮುಖ ಬ್ರಹ್ಮ ಕರಾರ್ಚಿತ ಚತುರ್ಯುಗ ಮೂರ್ತಿ ಶ್ರೀ ಮನ್ಮೂಲರಾಮದೇವರ ಪೂಜೆ, ಭಿಕ್ಷೆ ಮೊದಲಿಗೆ ಮಠದ ಶಿಷ್ಯರಾದ ಕುಲಕರಣಿ ಯೊಗೀಂದ್ರರಾಯರ (ಪ್ರಾಣೇಶದಾಸರು) ಮನೆಯಲ್ಲಿ ಆಯಿತು. ಮಧ್ಯಾನ ಶ್ರೀಗಳವರು ನಸುನಗುತ್ತಾ ದಾಸರೇ,ಮೂಲರಾಮನಿಗೇನು ಕಾಣಿಕೆ ಕೊಡುವಿರಿ? ಎಂದು ಕೇಳಿದರು.ಎಲ್ಲವೂ ಸಂಸ್ಥಾನದ್ದೆ,ಬೇಕಾದ್ದನ್ನು ಶ್ರೀಗಳವರು ತೆಗೆದುಕೊಳ್ಳಬಹುದು. ಎಂದರು ಕುಲಕರಣಿಯವರು. ನಿಮ್ಮ ಮನೆಯ ಹಿತ್ತಲಿನಲ್ಲಿರುವ ಜೋಳದ ಬಣಿವೆ.ಆ ಸ್ಥಳವನ್ನು ನಮಗೆ ದಾನಕೊಡಿರಿ ಎಂದು‌ ಶ್ರೀಗಳವರು‌ ಹೇಳಿದರು. ಅದೇಕೆ ಮಹಾಸ್ವಾಮಿ?ಬೇರೆ ಯಾವುದಾದರೂ ಪ್ರಶಸ್ತವಾದ ಸ್ಥಳ ಕೊಡುತ್ತೆನೆ ಇಲ್ಲ ನಮಗದೇ ಬೇಕು  ಮೂಲರಾಮನ ಅಪೇಕ್ಷೆ ಎಂದರು‌ ಶ್ರೀಗಳು. ಕುಲಕರಣಿಯವರು ಅಪ್ಪಣೆ ಸ್ವಾಮಿ ಎಂದು ಅದನ್ನು ಕೃಷ್ಣಾರ್ಪಣಪೂರ್ವಕವಾಗಿ ಶ್ರೀಗಳವರಿಗೆ ದಾನಕೊಟ್ಟರು. ಶ್ರೀಗಳವರು ಇದು ನಿಮ್ಮ ಸ್ವಾಧಿನದಲ್ಲೇ ಇರಲಿ,ನಾವು ಅಪೇಕ್ಷಿಸಿದಾಗ ಅದನ್ನು ನಮ್ಮ ವಶಕ್ಕೆ ಕೊಡಿರಿ ಎಂದು ಹೇಳಿ ಮುಂದೆ ಸಂಚಾರಕ್ಕೆ ಹೊರಟರು.


ಆಗ ಪುಣೆಯಲ್ಲಿ ಪೇಶ್ವೆಗಳ ಆಡಳಿತ ನಡೆಯುತ್ತಿತ್ತು.ಬಾಲಾಜಿ ಬಾಜೀರಾಯನ ಕಾಲ.ರಾಮಾಶಾಸ್ತ್ರಿಗಳೆಂಬ ಪ್ರಸಿದ್ಧ ಅದ್ವೈತ ಪಂಡಿತರು ತಮ್ಮ ಪ್ರತಿಭಾಶಕ್ತಿಯಿಂದ ಪೇಶ್ವೆಗಳ ನ್ಯಾಯಾಧೀಶರಾಗಿದ್ದರು. ಶ್ರೀಗಳವರ ಸವಾರಿ ಅಲ್ಲಿಗೆ ಚಿತ್ತೈಸಿತು.ಅಲ್ಲಿ ಬ್ರಾಹ್ಮಣರಾದ ಪೇಶ್ವೆಗಳು ಶ್ರೀಗಳವರನ್ನು ಮೂಲರಾಮನನ್ನು ಆದರದಿಂದ ಬರಮಾಡಿಕೊಂಡು‌ ಸತ್ಕರಿಸಿದರು.
ರಾಮಾಶಾಸ್ತ್ರಿಗಳಿಗೂ  ಶ್ರೀಗಳವರಿಗೂ ವಾಕ್ಯಾರ್ಥವಾಗಬೇಕೆಂದು ವ್ಯವಸ್ಥೆಯಾಯಿತು‌. ರಾಮಾಶಾಸ್ತ್ರಿಗಳ ಮನೆಯೇ ವಾಕ್ಯಾರ್ಥದ ಸ್ಥಳ. ರಾಮಾಶಾಸ್ತ್ರಿಗಳು ಸೋತರೆ ಆ ಮನೆಯನ್ನು ಶ್ರೀಗಳವರಿಗೆ ಬಿಟ್ಟುಕೊಡಬೇಕೆಂದೂ, ಶ್ರೀಗಳವರೂ ಸೋತರೆ ತಮ್ಮ ಬಿರುದು-ಮರ್ಯಾದೆಗಳನ್ನೆಲ್ಲಾ ಬಿಟ್ಟುಬಿಡಬೇಕೆಂದೂ ನಿರ್ಣಯವಾಗಿ ವಾಕ್ಯಾರ್ಥ ಆರಂಭವಾಯಿತು.

 ಆ ಹೊತ್ತಿಗೆ ಸರಿಯಾಗಿ ಶ್ರೀವಾದೀಂದ್ರಸ್ವಾಮಿಗಳ ಪೂರ್ವಾಶ್ರಮದ ಪುತ್ರರತ್ನರಾದ ಜಯರಾಮಾಚಾರ್ಯರು (ಶ್ರೀ ಧೀರೆಂದ್ರತೀರ್ಥರು) ಸಂಸ್ಥಾನಕ್ಕೆ ಬಂದಿದ್ದರಿಂದ ಶ್ರೀಗಳವರಿಗೆ ಬಹಳ ಆನಂದವಾಯಿತು.ಅವರು ಆಚಾರ್ಯರನ್ನು ಆದರದಿಂದ ಬರಮಾಡಿಕೊಂಡರು.

ಸ್ವಾಮಿಗಳು ಮತ್ತು ರಾಮಾಶಾಸ್ತ್ರಿಗಳ‌ ವಾದದಲ್ಲಿ ಜಯರಾಮಾಚಾರ್ಯರು ಸ್ವಾಮಿಗಳಿಗೆ ಮುಖ್ಯ ಬೆಂಬಲಿಗರಾಗಿ ನಿಂತು ವಾಕ್ಯಾರ್ಥದಲ್ಲಿ ಭಾಗವಹಿಸಿದರು.ಶ್ರೀಗಳವರ ಪಕ್ಷಕ್ಕೆ ಜಯವಾಯಿತು.ಸಮಯಬಂಧದಂತೆ ರಾಮಾಶಾಸ್ತ್ರಿಗಳು ತಮ್ಮ‌ ಮನೆಯನ್ನು ಮೂಲರಾಮನಿಗೆ ಬಿಟ್ಟು ಕಾಶಿಕಡೆಗೆ ಹೊರಟುಬಿಟ್ಟರು.ಅವರ ಮನೆಯೇ ಮೂಲರಾಮನ ಆವಾಸವಾಯಿತು.

ರಾಮನಗೃಹ ವೀರಾಮಗಾಯ್ತು ಆ|
ರಾಮಗೆ ವಿರಾಮವು ಆಯ್ತು||
ರಾಮಣೀಯಕಪುರದೀಮೆರೆದು ಮುನಿ|
ಶ್ರೀಮಂತಗೆ ಸನುಮತವಾಯಿತು|| ಎಂದು ವರದೇಶವಿಠಲರು‌ ಕೊಂಡಾಡಿದ್ದಾರೆ.

ಪೂನಾ ಶ್ರೀಮಂತರು ಅದ್ವೈತಿಗಳು.ಆದರೂ ಅವರು ಶ್ರೀಗಳವರ ಪಾಂಡಿತ್ಯಕ್ಕೆ ಶ್ರೀಗಳವರ ವರ್ಚಸ್ಸಿಗೆ ತಲೆದೂಗಿ ಅವರನ್ನು ವಿಶೇಷವಾಗಿ ಸತ್ಕರಿಸಿದರು. ಶ್ರೀಗಳವರು ಅಲ್ಲೇ ತಮ್ಮ ಕೊನೆಗಾಲವನ್ನು ಕಳೆದು ವಿಶ್ವಾವಸು ಸಂವತ್ಸರದ ಆಷಾಡ ಶುದ್ಧ ಷಷ್ಠಿಯ ದಿನ ಅಲ್ಲೇ ಬೃಂದಾವನಸ್ಥರಾದರು.

ಇವರ ಶಿಷ್ಯಾರಾದ ಶ್ರೀ ಭುವನೇಂದ್ರತೀರ್ಥರು ಆ  ಸ್ಥಳದಲ್ಲಿ ಮಠವನ್ನು ಕಟ್ಟಸಿ ಅಲ್ಲಿ ಅತ್ಯಂತ ವೈಭವದಿಂದ ಬೃಂದಾವನ ಪ್ರತಿಷ್ಠೆ ಮಾಡಿಸಿದರು. ಪೇಶ್ವೆಗಳ ರಾಜ್ಯವಿರುವತನಕ ಅವರು ಅಲ್ಲಿ ಪೂಜಾದಿಗಳಿಗೆ ಧನಸಹಾಯ ಮಾಡುತ್ತಿದ್ದರು.

ಅಲ್ಲಿ ಬೃಂದಾವನಸ್ಥರಾದ ಮೇಲೆ ಇತ್ತ ಪ್ರಾಣೇಶದಾಸರ ಸ್ವಪ್ನದಲ್ಲಿ ಅಂದುರಾತ್ರಿ ಶ್ರೀಗಳವರು ಕಾಣಿಸಿಕೊಂಡು ಭಕ್ತರಾದ ಪ್ರಾಣೇಶದಾಸರಿಂದ ತಾವು ದಾನ ತೆಗೆದುಕೊಂಡ ಹುಲ್ಲುಬಣಿವೆಯ ಕೆಳಗೆ ತಾವು ಬಂದು ಸನ್ನಿಹಿತರಾಗಿರುವರೆಂದೂ ಅದನ್ನು ತೆಗೆದರೆ ಅದರ ಕೆಳಗೆ ತುಳಸೀಗಿಡವಿರುವುದೇ ಇದಕ್ಕೆ ಸಂಕೇತವೆಂದೂ,ಅಲ್ಲಿ ತಮ್ಮ ಪೂಜಾರಾಧನೆ ನಡೆಸಬೇಕೆಂದೂ ಅಪ್ಪಣೆ ಮಾಡಿದರು.ದಾಸರ ಆನಂದಕ್ಕೆ ಎಣೆಯಿರಲಿಲ್ಲ.ತಕ್ಷಣವೇ ಅವರು ಎದ್ದು ಸ್ನಾನಾದಿಗಳನ್ನು ತೀರಿಸಿಕೊಂಡು ಜನರ ಸಹಾಯದಿಂದ ಆ ಬಣಿವೆಯನ್ನು ತೆಗೆದರು.ಅದರ ಕೆಳಗೆ ಒಂದು ಆಳಿನೆತ್ತರದ ತುಳಸಿಗಿಡವನ್ನು ನೋಡಿ ಎಲ್ಲರಿಗೂ ಅತ್ಯಾಶ್ಚರ್ಯವಾಯಿತು.ಸ್ಥಳವನ್ನೆಲ್ಲ ಶುದ್ಧಿಪಡಿಸಿ ಅಂದಿನಿಂದ ಅಲ್ಲಿ ಪೂಜೆಗಾರಂಭಿಸಿದರು.ಸ್ವಲ್ಪಕಾಲ ಆ ತುಳಸಿಗಿಡಕ್ಕೆ ಪೂಜೆ ನಡುಯುತ್ತಿತ್ತು.

ಆಮೇಲೆ ಶ್ರೀಗಳವರ ಆಜ್ಞೆಯಂತೆ ಗುಲಗಂಜಿಯ ಮೊರಡಿಯಿಂದ ಶಿಲೆಯನ್ನು ತಂದು ಅಲ್ಲಿ ಒಂದು ಬೃಂದಾವನ ನಿರ್ಮಿಸಿ ಪ್ರತಿಷ್ಠಿಸಿದರು.ಪುಣೆಯಿಂದ ಶ್ರೀಗಳವರ ಪಾದುಕೆಯನ್ನು ತರಿಸಿಟ್ಟರು. ಅಲ್ಲಿಯೂ ಶ್ರೀ ವರದೇಂದ್ರಸ್ವಾಮಿಗಳ ಮಠ ನಿರ್ಮಾಣವಾಯಿತು.ಅಂದಿನಿಂದ ಆರಾಧನೆಯೂ ಇಂದಿಗೂ ವಿಜೃಂಭಣೆಯಿಂದ ನಡೆಯುತ್ತಿದೆ.ಆರ್ಥಿಗಳು ಅಲ್ಲಿ ಸೇವೆಮಾಡಿ ತಮ್ಮ ಅಭೀಷ್ಟಗಳನ್ನು ಪಡೆಯುತ್ತಿದ್ದಾರೆ.

ದಾಸರಿಗೆ ಸ್ವಪ್ನಾವಾದ ವೃತ್ತಾಂಶವನ್ನು ಅವರ ಶಿಷ್ಯರಾದ ವರದೇಶವಿಠಲರು ಪದ್ಯರೂಪವಾಗಿ ಸ್ತುತಿಸಿದ್ದಾರೆ.

ಪ್ರಾಣೇಶದಾಸರು ಶ್ರೀಗಳವರ ಮೇಲೆ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.ಇಂದಿಗೂ ಹರಿದಾಸಸಾಹಿತ್ಯ ಪ್ರಕಟಣೆಗಾಗಿ ಲಿಂಗಸೂಗೂರಿನಲ್ಲಿ ಕೆಲಸಮಾಡುತ್ತಿರುವ ಸಂಸ್ಥೆ ವರದೇಂದ್ರ ಹರಿದಾಸ ಸಾಹಿತ್ಯ ಮಂಡಲವೆಂಬ ಹೆಸರಿನಿಂದ ಕಾರ್ಯ ಚಟುವಟಿಕೆಯಲ್ಲಿರುವುದು ಸ್ತುತ್ಯವಾಗಿದೆ.

ಇಂತಹ ಮಹಾನುಭಾವರಾದ ಮಹಾ ಜ್ಞಾನಿಗಳಾದ ಮಹಾ ಮಹಿಮರಾದ ನಂಬಿಬಂದು ಸೇವೆ ಮಾಡಿದವರಿಗೆ  ರಾಯರಂತೆ ಅತೀ ಶೀಘ್ರದಲ್ಲೇ ಫಲವನ್ನು ಕರುಣಿಸುವ ಶ್ರೀ ವರದೇಂದ್ರತೀರ್ಥ ಶ್ರೀಪಾದರ ಅನುಗ್ರಹ ಅವರ ಅಂತರ್ಯಾಮಿಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರೀ ಮುಖ್ಯಪ್ರಾಣದೇವರ ಶ್ರೀ ಮೂಲರಾಮದೇವರ ಅನುಗ್ರಹ ಸದಾ‌ ನಮ್ನೆಲ್ಲರ ಮೇಲಾಗಲಿಯಂದು ಪ್ರಾರ್ಥಿಸೋಣ..

ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|
ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮಃ||

Comments

Popular posts from this blog

Subrahmanya Shashti

Rathasaptami

Helavanakatte Giriyamma