Sripadarajaru

ಆಪತ್ಕಾಲದ ಮಿತ್ರ ವಿಜಯವಿಠ್ಠಲರೇಯನ|ವ್ಯಾಪಾರವನ್ನು ನೆನೆದು ನಲಿದಾಡುವ ಶ್ರೀ ಶ್ರೀಪಾದರಾಜಗುರುಸಾರ್ವಭೌಮರ  ಆರಾಧನಾ ಮಹೋತ್ಸವ ಇಂದು. ತನ್ನಿಮಿತ್ಯ ಅವರ ಅಡಿದಾವರೆಗಳಲ್ಲಿ ನಾಲ್ಕು ಪದಗಳ ಭಕ್ತಿಪೂರ್ವಕ ಸಮರ್ಪಣೆ. 

ಮುತ್ತಿನ ಕವಚ ಮೇಲ್ಕುಲಾವಿ|ನವರತ್ನ ಖಚಿತ ಕರ್ಣಕುಂಡಲ|ಕಸ್ತೂರಿ ತಿಲಕ ಶ್ರೀಗಂಧಲೇಪನ ವಿಸ್ತಾರದಿಂದ ಮೆರೆದು ಬರುವ". ಮಹಿಮೆ ಸಾಲದೇ ಇಷ್ಟೇ ಮಹಿಮೆ ಸಾಲದೆ|ಅಹಿಶಯನನ ಒಲುಮೆಯಿಂದ ಮಹಿಯೊಳೊಮ್ಮೆ ಶ್ರೀಪಾದರಾಜರ-ಇದು ಶ್ರೀಪಾದರಾಜರನ್ನು ಕುರಿತು ಅವರ ವಿದ್ಯಾಶಿಷ್ಯರಾದ ವ್ಯಾಸರಾಜರು ರಚಿಸಿದ ಕೃತಿ. ಧ್ರುವಾಂಶರಾದ ಶ್ರೀಪಾದರಾಜರು ಒಬ್ಬ ಯತಿಯಾಗಿಯೂ ಸಕಲ ರಾಜ ವೈಭೋಗವನ್ನು ಹೊಂದಿದ್ದು ಅವರ ವಿಶೇಷತೆ. ಅವರು  ಅಪರೋಕ್ಷೀಕೃತಶ್ರೀಶರು ಭಗವಂತನ ಆಶಯವನ್ನು ಬಲ್ಲವರು.ಯತ್ಯಾಶ್ರಮದಲ್ಲಿಯೂ ಅವರನ್ನು ಅಷ್ಟು ವೈಭವದಿಂದ ಮೆರೆಸಬೇಕೆಂಬುದು ಶ್ರೀ ಹರಿಯ ಸಂಕಲ್ಪ.ಸಾಮಾನ್ಯರ ದೃಷ್ಟಿಯಲ್ಲಿ ನೋಡಿದರೆ ಇದು ಆಭಾಸ ಎನಿಸಬಹುದು.ಆದರೆ ಭಗವಂತನ ಇಚ್ಛೆಯೇ ಪರಮಧರ್ಮ. ಈ ವೈಭವಗಳು ಅವರ ಸಾಧನೆಗೆ,ಪ್ರತಿಕೂಲವಾಗಲಿಲ್ಲ. ಎಲ್ಲವೂ ಅವನದೇ ಎಂಬ ಸಂಪೂರ್ಣ ಮನೋಭಾವ ಹೊಂದಿ ಅವನಲ್ಲಿ ಶರಣಾದಾಗ ಯಾವುದೂ ಸಾಧಕನ ಸಾಧನೆಗೆ ಮಾರಕವಾಗುವದಿಲ್ಲ. 

 ಶ್ರೀಸ್ವರ್ಣವರ್ಣ ತೀರ್ಥರಿಂದ  ಯತ್ಯಾಶ್ರಮವನ್ನು ಸ್ವೀಕರಿಸಿ ಲಕ್ಷ್ಮೀನಾರಾಯಣಯೋಗಿಯಾದರು. ಒಂದು ಸಲ ಶ್ರೀರಾಘವೇಂದ್ರಮಠದ ಪರಂಪರೆಯಲ್ಲಿ ಬಂದ ಶ್ರೀವಿಭುದೇಂದ್ರತೀರ್ಥರು ಶ್ರೀಲಕ್ಷ್ಮೀನಾರಾಯಣ ಯೋಗಿಗಳೊಂದಿಗೆ ಕೊಪ್ಪರ ನರಸಿಂಹದೇವರ ಕ್ಷೇತ್ರಕ್ಕೆ ಬರುತ್ತಾರೆ.ಅಲ್ಲಿ ಉತ್ತರಾದಿಮಠಾಧೀಶರಾದ ಶ್ರೀರಘುನಾಥತೀರ್ಥರೂ  ಉಪಸ್ಥಿತರಿದ್ದರು. ಶ್ರೀಲಕ್ಷ್ಮೀನಾರಾಯಣ ಯೋಗಿಗಳು ಮಾಡಿದ ಶ್ರೀಮನ್ಯಾಯಸುಧಾ ಮಂಗಲದ ಅನುವಾದವನ್ನು ಕೇಳಿ ಶ್ರೀರಘುನಾಥತೀರ್ಥರು ಬಹಳ ಸಂತೋಷಪಟ್ಟು  ನಾವು ಶ್ರೀಪಾದರಾದರೆ ನೀವು ಶ್ರೀಪಾದರಾಜರು ಎಂದು ಮನದುಂಬಿ  ಅಭಿನಂದಿಸುತ್ತಾರೆ.ಅಂದಿನಿಂದ  ಶ್ರೀಪಾದರಾಜರು ಎಂಬ ಅನ್ವರ್ಥಕ ನಾಮವನ್ನು ಹೊಂದಿ ಮುಂದೆ ಶ್ರೀಪಾದರಾಜರೆಂದೇ ಪ್ರಸಿದ್ಧಿಯಾದರು. ಮಠಾಧೀಶರಾಗಿದ್ದು, ರಂಗವಿಠ್ಠಲ  ಅಂಕಿತದಿಂದ ಕನ್ನಡದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಲ್ಲದೇ ಪೂಜಾಕಾಲದಲ್ಲಿ ಭಾಗವತರಿಂದ ಅವನ್ನು ಹಾಡಿಸುವ ಮೂಲಕ ಶ್ರೀಪಾದರಾಜರು ಮಾಡಿದ ಕ್ರಾಂತಿ ಮಹತ್ತರವಾದದ್ದು.ಭಕ್ತಿಯ ಅಭಿವ್ಯಕ್ತಿಗಾಗಿ,ವೇದವಾಙ್ಮಯ,ಉಪನಿಷತ್ತಿನ, ರಾಮಾಯಣ,ಮಹಾಭಾರತ, ಶ್ರೀಮದ್ಭಾಗವತ, ಭಗವದ್ಗೀತೆ,ಮುಂತಾದ ಗ್ರಂಥಗಳನ್ನು,ಅವುಗಳಲ್ಲಿರುವ ಸಂದೇಶಗಳು, ಸಂಸ್ಕ್ರತ ಬಾರದ ಜನಸಾಮಾನ್ಯರಿಗೂ ಅರ್ಥವಾಗಿ,ಅವರು ಸಾಧನೆಯ ಮಾರ್ಗದಲ್ಲಿ ನಡೆಯುವಂತಾಗಲು ಕನ್ನಡವನ್ನು ದಿಟ್ಟವಾಗಿ ಬಳಸಿದ ಕಾರಣ ಶ್ರೀಪಾದರಾಜರು ದಾಸಸಾಹಿತ್ಯದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ.ಗೋಪಿಗೀತ,ಭ್ರಮರಗೀತೆ,ವೇಣುಗೀತೆಗಳಂಥ ಭಕ್ತಿರಸಭರಿತ ಕೃತಿಗಳನ್ನೂ ವಾಯುದೇವರ ಮೂರೂ ಅವತಾರಗಳನ್ನು ವರ್ಣಿಸುವ  ಮಧ್ವನಾಮ ಎಂಬ ಕೃತಿಯನ್ನು ರಚಿಸಿದ್ದಾರೆ.ಇದೂ ಅಲ್ಲದೇ ಉಗಾಭೋಗಗಳನ್ನು ಮತ್ತು ಕೆಲವು ಸುಳಾದಿಗಳನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿಯೂ ಅಪಾರ ಪಾಂಡಿತ್ಯವನ್ನು ಹೊಂದಿದ್ದ ಇವರು ವಾಗ್ವಜ್ರ ಎಂಬ ಮೇರು ಕೃತಿಯನ್ನು ರಚಿಸಿದ್ದಾರೆ.

ಅವರ ಕೃತಿಗಳಲ್ಲಿ ಭಕ್ತಿ,ವೈರಾಗ್ಯ, ಭಗವನ್ನಿಷ್ಠೆ ಆಚಾರ್ಯ ಮಧ್ವರಲ್ಲಿ ಅವರಿಗಿರುವ ಅಪಾರ ಶ್ರದ್ಧೆಯನ್ನು ಕಾಣಬಹುದು.

ಧ್ಯಾನವು ಕೃತಯುಗದಲ್ಲಿ ಎಂಬ ಅವರ ಉಗಾಭೋಗದಲ್ಲಿ ಕಲಿಯುಗದಿ ಗಾನದಿ ಕೇಶವನೆಂದರೆ ಕೈಗೂಡುವನು ರಂಗ ವಿಠ್ಠಲ ಎಂದು ಹೇಳಿ ಕಲಿಯುಗದಲ್ಲಿ ನಾಮಸಂಕೀರ್ತನೆಗೆ ಇರುವ ಮಹತ್ವವನ್ನು ಸಾರುತ್ತಾರೆ.ಮುಮುಕ್ಷುಗಳಿಗೆ ಬೇಕಾದ ವಸ್ತುಗಳ ಪಟ್ಟಿ ಮಾಡುತ್ತಾ ಭಕ್ತಿ ಬೇಕು ವಿರಕ್ತಿ ಬೇಕು ಸರ್ವಶಕ್ತಿ ಬೇಕು ಎನ್ನುತ್ತಾ ಸತ್ಸಂಗ ಮಾಡಬೇಕು ದುಸ್ಸಂಗ ಬಿಡಬೇಕು'ರಂಗವಿಠಲನ ಪಾದ ಹಿಂಗದೆ ಕೊಂಡಾಡಬೇಕು ಎನ್ನುತ್ತಾರೆ.ಅವರ ಇನ್ನೊಂದು ಕೃತಿಯಲ್ಲಿ ಭಗವಂತನನ್ನು ಪ್ರಶ್ನಿಸುತ್ತಾರೆ.ಇದನಾದರು ಕೊಡದಿದ್ದರೆ ನಿನ್ನ  ಪದಕಮಲವ ನಂಬಿ ಭಜಿಸುವದೆಂತೋ

ಸಾಲವಾಯಿತೆಂದು "ಸಂಬಳ ಎನಗೆ  ಸಾಲದೆಂದು ಬೇಡ ಬಂದುದಿಲ್ಲ|ನಾಲಿಗೆಯಲಿ ನಿನ್ನ ನಾಮದುಚ್ಚರಣೆಯ ಪಾಲಿಸಬೇಕೆಂದು ಬೇಡಿದೆನಲ್ಲದೆ"

"ಆಗಬೇಕು ರಾಜ್ಯಭೋಗಗಳೆನಗೆಂದು|ಈಗ ನಾನು ಬೇಡ ಬಂದುದಿಲ್ಲ|ನಾಗಶಯನ ರಂಗವಿಠಲ ನಾ ನಿನ್ನ ಬಾಗಿಲ ಕಾಯುವ ಭಾಗ್ಯ ಸಾಕೆಂದರೆ"

ಸಂಸಾರವನ್ನು ಕಾಡಬೆಳದಿಂಗಳಿಗೆ ಹೋಲಿಸಿ, ಉಂಟಾದ ಕಾಲಕ್ಕೆ ನೆಂಟರು ಇಷ್ಟರು|ಬಂಟರಾಗಿ ಬಂದು ಬಾಗಿಲ ಕಾಯ್ವರು|ಉಂಟಾದತನ ತಪ್ಪಿ ಬಡತನ ಬಂದರೆ|ಒಂಟೆಯಂತೆ ಗೋಣ ಮೇಲಕ್ಕೆತ್ತುವರು ಎಂದು ಸಂಸಾರದ ಕಟುಸತ್ಯವನ್ನು ಹೇಳಿದ್ದಾರೆ.ಅನೇಕ ವೈರಾಗ್ಯಪೂರ್ಣ ಕೃತಿಗಳನ್ನು ರಚಿಸಿ ಸಾಧಕನು ಈ ಸಂಸಾರವೆಂಬ ಭವಾಬ್ಧಿಯನ್ನು ದಾಟುವ ಉಪಾಯವನ್ನು ತಿಳಿಸಿದ್ದಾರೆ. ಅವರ ಇನ್ನೊಂದು ಅತ್ಯಂತ ಪ್ರಸಿದ್ಧಿಯಾದ  ಇಟ್ಟಾಂಗೆ ಇರುವೇನು ಹರಿಯೇ ಎಂಬ ಹಾಡಿನಲ್ಲಿ ಭಗವಂತನ ಅನುಗ್ರಹದ ಫಲ ಮತ್ತು ಅವನ ಅನುಗ್ರಹ ತಪ್ಪಿದರೆ ಏನಾಗುತ್ತದೆ ಎಂದು ಅತ್ಯಂತ ಮಾರ್ಮಿಕವಾಗಿ ತಿಳಿಸಿದ್ದಾರೆ. ಭಗವಂತನಲ್ಲಿ ಈ ತರಹದ ಒಟ್ಟಾರೇ ಶರಣಾಗತಿ ನಮಗೆ ಯಾವುದೇ ಆತಂಕ ಕೊಡುವದಿಲ್ಲ. ಕಡೆಯ ನುಡಿಯಲ್ಲಿ ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತಸಂಗವಿರಲಿ ದುಷ್ಟಸಂಗಬೇಡ  ಎಂದು ಪ್ರಾರ್ಥಿಸುತ್ತಾ  ಸಜ್ಜನರ ಸಂಗ,ಸಮಾಗಮ,ಅವರ ಸೇವೆ ಹೇಗೆ ಸಾಧಕನ ಸಾಧನೆಗೆ ಪೂರಕ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ. ಮತ್ತೊಂದು ಪದ್ಯದಲ್ಲಿ, ತಿರುತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆ|ಪರಿಪರಿಯ ಪಾಪಗಳ ಮಾಡಲಾರೆ|ಜನನ ಮರಣಗಳೆರಡ ಪರಿಹರವ ಮಾಡಯ್ಯ|ಕರುಣಾಸಮುದ್ರ ಮುರವೈರಿ ಶ್ರೀಕೃಷ್ಣ ಉತ್ತಮರ ಸಂಗವನು ಎನಗಿತ್ತು ಸಲಹೊ|ಚಿತ್ತಜಾಜನಕ ಸರ್ವೋತ್ತಮ ಮುಕುಂದ||ಪ|| ಎಂದು ಸಜ್ಜನರ ಸಂಗಕ್ಕಾಗಿ ಪ್ರಾರ್ಥಿಸಿದ್ದಾರೆ.     ಒಬ್ಬ ಮಠಾಧೀಶರಾಗಿ ,ಸಂಸ್ಕೃತದಲ್ಲಿ ಉದ್ದಾಮ ಪಂಡಿತರಾಗಿ ವ್ಯಾಸರಾಜರೆಂಬ ಅನರ್ಘ್ಯ ರತ್ನವನ್ನು ವೇದವಾಙ್ಮಯ ಪ್ರಪಂಚಕ್ಕೆ ನೀಡಿದ ಶ್ರೀಪಾದರಾಜರು ನಮ್ಮಂತಹ ಪಾಮರರ ಮೇಲೆ ಅತ್ಯಂತ ಅಂತಃಕರಣದಿಂದ ಅನೇಕ ಕೃತಿಗಳನ್ನು ರಚಿಸಿ ಅನುಗ್ರಹ ಮಾಡಿದ್ದಾರೆ.ಅನೇಕ ಜೋಗುಳ, ಲಾಲಿ ಹಾಡುಗಳನ್ನು ಮಾಡಿದ್ದಾರೆ.23ನುಡಿಗಳ ಲಾಲಿ ಹಾಡಿನಲ್ಲಿ ಭಗವಂತನ ಅವತಾರಗಳನ್ನು,ಅವನನ್ನು ತೂಗುವ ಭಕ್ತರ ವರ್ಣನೆಯನ್ನು ಮಾಡಿದ್ದಾರೆ

ಪದ್ಮರಾಗವ ಪೋಲುವ ಹರಿಪಾದ|ಪದ್ಮವನು ತಮ್ಮ ಹೃದಯ|ಪದ್ಮದಲಿ ನಿಲಿಸಿ ಪಾಡಿ ತೂಗಿದರು|ಪದ್ಮಿನೀ ಭಾಮಿನಿಯರು ಶ್ರೀಪಾದರಾಜರ ಮೇಲಿನ ಸ್ತೋತ್ರಗಳು. ಪದವಾಕ್ಯಪ್ರಮಾಣಾಬ್ಧಿವಿಕ್ರೀಡನವಿಶಾರದಾನ್|ಲಕ್ಷ್ಮೀನಾರಾಯಣಮುನೀನ್ ವಂದೇ ವಿದ್ಯಾಗುರೂನ್ ಮಮ ಶ್ರೀವ್ಯಾಸರಾಯರು ತಾತ್ಪರ್ಯಚಂದ್ರಿಕಾದಲ್ಲಿ. ಜ್ಞಾನವೈರಾಗ್ಯಭಕ್ತ್ಯಾದಿಕಲ್ಯಾಣಗುಣಶಾಲಿನಃ|ಲಕ್ಷ್ಮೀನಾರಯಣಮುನೀನ್ ವಂದೇ ವಿದ್ಯಾಗುರೂನ್ ಮಮ ವ್ಯಾಸರಾಯರು ನ್ಯಾಯಾಮೃತದಲ್ಲಿ

   ನಂಬಿರೊ ಶ್ರೀಪಾದರಾಜರ ಚರಣವ|ಹಂಬಲಿಸದಿರಿ ಅನ್ಯಮಾರ್ಗ|ತುಂಬಿ ತುಳುಕುತಿಪ್ಪುದು ಇಹಪರದ ಭಾಗ್ಯ|ಉಂಬುವುದುಡುವದು ಅಡಿಗಡಿಗೆ|ಡಿಂಬದೊಳಗೆ ಹರಿಯ ಧ್ಯಾನಂಗತನಾಗಿ|ಕಾಂಬುವ ಲೇಶ ಪಾಪಂಗಳಿಲ್ಲದೆ|ಗಂಭೀರ ಸಂಸಾರವಾದರೂ ಅದೆ ಅವಗೆ|ಇಂಬುಗೊಡುವದು ವೈದೀಕವೆನಿಸಿ|ಅಂಬುಜಸಖ ತೇಜ ವಿಜಯವಿಠ್ಠಲರೇಯನ                  ಬೆಂಬಿಡದೆ ಭಜಿಸಬೇಕು ಈ ಪರಿಯಲ್ಲಿ||       "ಸಕಲಶಾಸ್ತ್ರಕಲಾಪ ಸನ್ಯಾಸಕುಲದೀಪ|ಸಕಲಸತ್ಯಸ್ಥಾಪ ಸುಜ್ಞಾನದೀಪ|ಪ್ರಕಟಪಾವನರೂಪ ಅರಿಕುಜನಮತಲೋಪ|ನಿಕಟವರ್ಜಿತಪಾಪ ಕೀರ್ತಿ ಪ್ರತಾಪ|" ವಾದಿಗಜಮಸ್ತಕಾಂಕುಶ ಸುಜನಬುಧಗೇಯ|ಮೇದಿನಿ ಸುರವಂದ್ಯ ಶ್ರೀಪಾದರಾಯ  -ಶ್ರೀವ್ಯಾಸರಾಜರು.  ಸಂಸ್ಕ್ರತ ಮಂತ್ರಮಾತುಗಳಲ್ಲಿಯ ಮಂಗಳಾತ್ಮಕ ಪಾವಿತ್ರ್ಯವನ್ನು ಕನ್ನಡಕ್ಕೆ ತಂದುಕೊಟ್ಟ ಕೀರ್ತಿ ಶ್ರೀಪಾದರಾಜರದು ಇಂತಹ ದ್ರುವಾಂಶರಾದ ಶ್ರೀಪಾದರಾಜರು ನಮಗೆ ಹರಿವಾಯುಗುರುಗಳಲ್ಲಿ ವಿಶೇಷವಾದ ರತಿಯನ್ನು ಕರುಣಿಸಲಿ  ಎಂದು ಪ್ರಾರ್ಥಿಸೋಣ.

Comments

Popular posts from this blog

Subrahmanya Shashti

Rathasaptami

Helavanakatte Giriyamma