Pitru paksha - Mahalaya
ಪಿತೃದೇವತೆಗಳ ಋಣ ತೀರಿಸುವ ಪರ್ವವೇ ಮಹಾಲಯ
ಪಿತೃಪಕ್ಷ ಆರಂಭವಾಗಿದೆ. ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯಲಾಗುತ್ತದೆ. ಪ್ರತಿಪತ್ನಿಂದ ಶುರುವಾಗಿ ಮಹಾಲಯ ಅಮಾವಾಸ್ಯೆ ದಿನ ಕೊನೆಗೊಳ್ಳುತ್ತದೆ. ಹಿರಿಯರು ನಮ್ಮನ್ನು ಬಿಟ್ಟು ಭೌತಿಕವಾಗಿ ದೂರವಾದರೂ ಅವರನ್ನು ನೆನಪಿಸಿಕೊಂಡು ಗೌರವ ಸಲ್ಲಿಸುವ ಪದ್ದತಿ ಭಾರತೀಯ ಪರಂಪರೆಯಲ್ಲಿದೆ.
ಭಾರತೀಯ ಸಂಸ್ಕೃತಿಯಲ್ಲಿ ಇಹ ಪರ ಸೌಖ್ಯಗಳಿಗೆ ಸಮಾನವಾದ ಪ್ರಾಧಾನ್ಯ ವನ್ನು ನಮ್ಮ ಸ್ಮೃತಿಕಾರರು ನೀಡಿದ್ದಾರೆ. ನಮ್ಮಿಂದ ದೂರವಾದ ಹಿರಿಯರನ್ನು ನೆನೆದು ಅವರಿಗೆ ಗೌರವ ಸಲ್ಲಿಸುವ ಸಂಪ್ರದಾಯ ಜಗತ್ತಿನ ಹಲವು ದೇಶಗಳಲ್ಲಿ ರೂಢಿಯಲ್ಲಿದೆ. ಹುಟ್ಟಿದ ಪ್ರತಿಯೊಬ್ಬ ಮಾನವನಿಗೂ ಮೂರು ಬಗೆಯ ಕರ್ತವ್ಯಗಳಿವೆ. ವೇದಗಳ ಮೂಲಕ ನಮಗೆ ಆಧ್ಯಾತ್ಮಿಕ ಜ್ಞಾನ ಕರುಣಿಸಿದವರು ಋಷಿಗಳು, ನಾವು ಅವರು ನೀಡಿದ ಜ್ಞಾನದ ಪರಂಪರೆಯನ್ನು ಉಳಿಸಿ ಬೆಳೆಸುವ ಮತ್ತು ಪ್ರತಿಫಲಾಪೇಕ್ಷೇ ಯಿಲ್ಲದೆ ಇನ್ನೊಬ್ಬರಿಗೆ ನೀಡುವ ಕರ್ತವ್ಯ ವನ್ನು ಹೊಂದಿದ್ದೇವೆ. ಇದನ್ನು ಮಾಡಿದಾಗ ಮಾತ್ರವೇ ನಾವು ಋಷಿ ಋಣದಿಂದ ಮುಕ್ತರಾಗಬಹುದು. ನಾವು ತಂದೆ-ತಾಯಿ, ಗುರು ಹಿರಿಯರಿಗೆ ಮಾಡುವ ಸೇವೆ, ಪರೋಪಕಾರ, ಪೂಜೆ ಮೊದಲಾದ ಸತ್ಕರ್ಮಗಳು ಯಜ್ಞಗಳೆನಿಸಿವೆ. ಇವುಗಳಿಂದ ದೇವತೆಗಳು ಸಂತುಷ್ಟರಾಗುವರು. ಈ ಕರ್ಮಾನುಷ್ಠಾನದಿಂದ ನಾವು ದೇವಋಣದಿಂದ ಮುಕ್ತರಾಗುತ್ತೇವೆ.ಇದರಂತೆ ಪುಣ್ಯ ಕರ್ಮಗಳ ಅನುಷ್ಠಾನದ ಮೂಲಕ ಸಾತ್ವಿಕವಾದ ಹಾಗು ದೇಶಭಕ್ತಿಯುಳ್ಳ ಸಂತತಿಯನ್ನು ಪಡೆಯುವುದು ನಮ್ಮ ಕರ್ತವ್ಯವಾಗಿದೆ.
ತಂದೆತಾಯಿಗಳ ಸೇವೆ ಹಾಗು ಅವರನ್ನು ಉದ್ದೇಶಿಸಿ ಬದುಕಿದಾಗಲು ಮೃತರಾದ ಮೇಲೂ ಮಕ್ಕಳು ಮಾಡುವ ಪುಣ್ಯಕಾರ್ಯಗಳು ಇಬ್ಬರ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಕಾರಣವಾಗಿರುವುದು. ನಮಗೆ ಉಪಕರಿಸಿದ ವ್ಯಕ್ತಿಗಳ ಋಣವನ್ನು ಎಂದೂ ಪೂರ್ಣವಾಗಿ ತೀರಿಸಲು ಸಾಧ್ಯವಾಗದಿದ್ದರೂ ಅವರನ್ನು ಸದಾ ಕೃತಜ್ಞತೆಯಿಂದ ನೆನೆದು ಅವರ ಸಂಪ್ರೀತಿಗಾಗಿ ಶ್ರದ್ಧೆಯಿಂದ ನಡೆಸುವ ಪುಣ್ಯಕಾರ್ಯಗಳನ್ನು ಶ್ರಾದ್ಧವೆನ್ನಲಾಗಿದೆ.ಮಹಾಲಯ ಅಮಾವಾಸ್ಯೆ ಕತ್ತಲೆಯ ಸಂಕೇತವಾದರೆ, ಅದರ ಮರುದಿನ ಕತ್ತಲನ್ನು ಹರಿಸುವ ನವರಾತ್ರಿ ಆರಂಭವಾಗುತ್ತದೆ. ಮನೆ, ಕರ್ಮಭೂಮಿ, ನದಿತೀರ ದಲ್ಲಿ ಮಾಡುವದಕ್ಕಿಂತ ಸಂಗಮಗಳಲ್ಲಿ ಮಾಡುವ ಪಿತೃಕಾರ್ಯ ಶ್ರೇಷ್ಠವಾಗಿರುತ್ತದೆ. ನಮ್ಮ ಬಾಳನ್ನು ರೂಪಿಸುವಲ್ಲಿ ಪೂರ್ವಜರು ಮಾಡಿದ ತ್ಯಾಗ ಅಪಾರ. ಅವರಿಂದು ಸ್ಥೂಲ ಶರೀರ ರೂಪದಲ್ಲಿ ನಮ್ಮ ಕಣ್ಣ ಮುಂದೆ ಇಲ್ಲವಾದರೂ ಸೂಕ್ಷ್ಮ ಶರೀರದಿಂದ ಪರೋಕ್ಷವಾಗಿ ನಮ್ಮ ಕರ್ತವ್ಯ ಕರ್ಮಗಳನ್ನು ವೀಕ್ಷಿಸುತ್ತ ಇರುತ್ತಾರೆ.
ಪಿತೃದೇವತೆಗಳ ಆರ್ಶೀವಾದದಿಂದಲೇ ಸಂತಾನ, ಸುಖ, ಧನಲಾಭಗಳು ಉಂಟಾಗುತ್ತವೆ. ಅವರಿಗೆ ನೀಡುವ ತರ್ಪಣದಿಂದ ಸಂತೃಪ್ತರಾಗಿ ನಮ್ಮನು ಹರಸುತ್ತಾರೆ. ಕೆಲವು ಸಮುದಾಯದಲ್ಲಿ ಶಾಸೋಕ್ತ ರೀತಿಯಲ್ಲಿ ಶ್ರಾದ್ಧ ಮಾಡಿದರೆ ಇನ್ನು ಕೆಲವರು ಅಗಲಿದ ಹಿರಿಯರಿಗೆ ಪ್ರಿಯವಾದ ತಿನಿಸು ‘ಎಡೆ’ ಇಟ್ಟು ಗೌರವಿಸುತ್ತಾರೆ. ಎಳ್ಳು ಹಬ್ಬವೆಂದು ಇದನ್ನು ಕರೆಯಲಾಗುತ್ತದೆ. ಮಾತೃದೇವೋಭವ , ಪಿತೃದೇವೋಭವ ಎಂದು ಪಠಿಸಿದರಷ್ಟೆ ಸಾಲದು, ಆ ಭಾವ ನಮ್ಮೊಳಗೆ ಹಾಸುಹೊಕ್ಕಾಗಬೇಕು. ಪಿತೃದೇವತೆಗಳ ಋಣ ತೀರಿಸುವ ಪರ್ವವೇ ಮಹಾಲಯ .
ಪಿತೃಕ್ರಿಯೆಗಳಿಗೆ ಅಮಾವಾಸ್ಯೆ ಪ್ರಶಸ್ತ
ಪಿತೃಲೋಕವು ಚಂದ್ರನ ಮೇಲ್ಭಾಗದಲ್ಲಿದೆ. ಶುಕ್ಲ ಪಕ್ಷದಲ್ಲಿ ಚಂದ್ರನು ಸೂರ್ಯನಿಂದ ದೂರಸರಿಯುತ್ತಾನೆ. ಆಗ ಪಿತೃಗಳಿಗೆ ರಾತ್ರಿ. ಕೃಷ್ಣಪಕ್ಷದಲ್ಲಿ ಸೂರ್ಯನು ದಿನದಿಂದ ದಿನಕ್ಕೆ ಚಂದ್ರಗೋಳದ ಹತ್ತಿರ ಬಂದು ಅಮಾವಾಸ್ಯೆಯಂದು ಒಂದೇ ಕಕ್ಷೆಯಲ್ಲಿ( ಸರಳ ರೇಖೆಯಲ್ಲಿ) ಸೇರಿದಾಗ ಪಿತೃಗಳಿಗೆ ಮಧ್ಯಾಹ್ನ ಕಾಲ. ಆಗ ಪಿತೃಗಳಿಗೆ ತೈಲ ಧಾನ್ಯವಾದ ಎಳ್ಳಿನಿಂದ ತರ್ಪಣ ಕೊಡುವುದರಿಂದ ವಸು ರುದ್ರ ಆದಿತ್ಯ ರೂಪದ ಪಿತೃಗಳು ಕೃತಕೃತ್ಯರಾಗುತ್ತಾರೆ. ಮಕ್ಕಳಿಗಾಗಿ ಮಾತಾಪಿತೃಗಳು ಮಾಡಿದ ತ್ಯಾಗ , ಕರ್ತವ್ಯಗಳ ಋಣದ ಭಾರವನ್ನು ಹಗುರ ಮಾಡಿಕೊಳ್ಳಲು ಮನುಷ್ಯ ಕಂಡುಕೊಂಡ ಸುಲಭ ಮಾರ್ಗವೇ ಈ ಪಿತೃಕಾರ್ಯವೆಂದರೂ ತಪ್ಪಲ್ಲ . ಪಿತೃಕಾರ್ಯಗಳು ಪುನರ್ ಜನ್ಮಸಿದ್ಧಾಂತವನ್ನು ಸಮರ್ಥಿಸುತ್ತವೆ. ಅಲ್ಲದೆ ಜನ್ಮಾಂತರ ಶರೀರ ನಿರ್ಮಾಣಕಾರ್ಯಕ್ಕೆ ಸಹಕಾರಿಯಾಗಿವೆ.
ಅದಕ್ಕಾಗಿಯೇ ಪಿತೃಕಾರ್ಯಗಳನ್ನು ಶ್ರದ್ಧೆಯಿಂದ ಶಾಸಬದ್ಧವಾಗಿ ಮಾಡಬೇಕು ಎನ್ನಲಾಗುತ್ತದೆ. ಸೂರ್ಯನು ಕನ್ಯಾ- ತುಲಾ ರಾಶಿಗಳ ನಡುವೆ ಹಾದುಹೋಗುವಾಗ ಯಮನು ಪಿತೃಗಳನ್ನು ಸ್ವಚ್ಛಂದವಾಗಿ ಹೋಗಲು ಬಿಡುವನು. ಪ್ರೇತಪುರದಿಂದ ಬಿಡಲ್ಪಟ್ಟು ಪಿತೃಗಳು, ತಮ್ಮ ಮಕ್ಕಳು ಮೊಮ್ಮಕ್ಕಳನ್ನು ನಿರೀಕ್ಷಿಸಲು ಬರುವರು. ಬಂದಾಗ ನೀಡಿದ ಅನ್ನದಾನ, ತರ್ಪಣ ಗಳಿಂದ ಸಂತೃಪ್ತರಾಗು ವರು. ಹರಸಲು ಹಾತೊರೆದು ಬಂದ ಪಿತೃಗಳಿಗೆ ಏನನ್ನೂ ನೀಡದಿದ್ದಾಗ ಹಸಿವಿನಿಂದ ಕಂಗೆಟ್ಟ ಅವರು ದೀರ್ಘ ನಿಟ್ಟುಸಿರು ಬಿಟ್ಟು ಶಪಿಸಿ ಮುಂದೆ ಸಾಗುವರು. ಅದರ -ಲವೇ ಮನೆಯಲ್ಲಿ ಅಶಾಂತಿಯ ವಾತಾವರಣ ಎಂಬುದರಲ್ಲಿ ಸಂದೇಹವಿಲ್ಲ. ಹೀಗಾಗಿ ಪಿತೃಪಕ್ಷದಲ್ಲಿ ಶ್ರಾದ್ಧದ ಆಚರಣೆ ಅತ್ಯಂತ ಸಮುಚಿತವಾದುದು.ಮುತ್ತೈದೆಯಾಗಿ ಮೃತರಾದವರಿಗೆ ಅವಿಧವಾನವಮಿ ಯಂದು, ವಂಶದಲ್ಲಿ ಯತಿಯಾಗಿ ಹೋದವರಿಗೆ ಯತಿದ್ವಾದಶಿಯಂದು, ಅಪಘಾತದ ದುರಂತದಲ್ಲಿ ಮೃತರಾಧವರಿಗೆ ಘಾತಚತುದರ್ಶಿಯಂದು ಶ್ರಾದ್ಧವನ್ನು ಮಾಡುವುದು ಶಾಸವಚನ.
ಆಚರಣೆಯ ಹಿಂದೊಂದು ಕಥೆ
ಮಹಾಲಯ ಅಮಾವಾಸ್ಯೆ ಆಚರಣೆ ಹಿಂದೊಂದು ಐತಿಹ್ಯವಿದೆ. ದಾನಶೂರ ಕರ್ಣ ತನ್ನ ಜೀವಿತಾವಧಿಯಲ್ಲಿ ಬೆಳ್ಳಿ, ಬಂಗಾರವನ್ನು ದಾನ ಮಾಡಿದ್ದರೂ ಅನ್ನದಾನ ಮಾಡಿರುವುದಿಲ್ಲ . ಹಾಗಾಗಿ ಇಹಲೋಕವನ್ನು ತ್ಯಜಿಸಿ ಪರಲೋಕಕ್ಕೆ ಪ್ರಯಾಣ ಬೆಳೆಸುವಾಗ ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ದುಃಖಿತನಾದ ಕುಂತಿಪುತ್ರ ಯಮರಾಜನನ್ನು ದೈನ್ಯತೆಯಿಂದ ಪ್ರಾರ್ಥಿಸಿ ಮಹಾಲಯ ಅಮಾವಾಸ್ಯೆಯಂದು ಭೂಮಿಗೆ ಬಂದು ಹತ್ತಾರು ಜನರಿಗೆ ಅನ್ನದಾನ ಮಾಡಿ ನೆಮ್ಮದಿಯಿಂದ ಪರಲೋಕಕ್ಕೆ ಹಿಂತಿರುಗುತ್ತಾನೆ.ಹೀಗಾಗಿ ಅಂದು ಹಸಿದವರಿಗೆ ಅನ್ನದಾನ ಮಾಡುವುದು ವಿಶೇಷ ಪುಣ್ಯಪ್ರದವಾಗಿದೆ.
Comments
Post a Comment