Jamakhandi Vadirajacharyaru



 || ಶ್ರೀ ಭಾವಿಸಮೀರ ವಾದಿರಾಜ ಗುರುಭ್ಯೋ ನಮ: ||

ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು (1842 - 1896) (ಶ್ರೀ ಇಭವರದವಿಠಲ ದಾಸರು)

ಆರಾಧನೆ - ಶ್ರಾವಣ ಬಹುಳ ತ್ರಯೋದಶಿ
ಅವತಾರದ ಕೊನೆಯ ಸ್ಥಳ  - ಹಂಪಿ (ಶ್ರೀ ರಘುನಂದನ ತೀರ್ಥರ ಬೃಂದಾವನದ ಹತ್ತಿರ ಸ್ಥಳದಲ್ಲಿ)

ಚಲತು ಚಲತು ತೂರ್ಣಂ ವಾದಿರಾಟ್ ದ್ವಿಟ್ ಶ್ರುಗಾಲಾ: |
ನಿಕಟಮುಪಗತೋಯಂ ಜಂಬುಖಂಡಾಚಾರ್ಯ ಸಿಂಹಃ ||


ಶ್ರೀ ಜಂಬುಖಂಡಿ ವಾದಿರಾಜಾರ್ಯರು 19ನೇ ಶತಮಾನದ ಮಹಾನ್ ಅಪರೋಕ್ಷ ಜ್ಞಾನಿಗಳು. ಶ್ರೀ ವಾದಿರಾಜರ ಋಜುತ್ವ ಸಮರ್ಥನೆಯ ಮಹಾನ್ ಸೇನಾನಿಗಳು . ತಮ್ಮ ದೀರ್ಘಾವಧಿಯಲ್ಲಿ ಅನೇಕ ಸಾಧನೆ, ಮಹಿಮೆ ಹಾಗು ಜ್ಞಾನದ ಲಹರಿಯನ್ನು ಜಗತ್ತಿಗೆ ತೋರ್ಪಡಿಸಿದ್ದಾರೆ.  ಶ್ರೀ ಆಚಾರ್ಯರು, ಆಷಾಢ ಬಹುಳ ಪಂಚಮಿಯಂದು ಧಾರವಾಡ ಜಿಲ್ಲೆಯ ಹಾನಗಲ್ಲು  ಎನ್ನುವ ಸ್ಥಳದಲ್ಲಿ ಆವತಾರ ಮಾಡಿದ್ದಾರೆ.


ಆಚಾರ್ಯರ ವಿದ್ಯಾಭ್ಯಾಸ:

ಶ್ರೀ ಆಚಾರ್ಯರು ತಮ್ಮ ವಿದ್ಯಾಭ್ಯಾಸವನ್ನು 20 ವರ್ಷಗಳ ಕಾಲ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠ ಶ್ರೀ ವಿದ್ಯಾಧೀಶ ತೀರ್ಥರ  ಹಾಗು ಶ್ರೀ ಸತ್ಯಪರಾಕ್ರಮ ತೀರ್ಥರ ಬಳಿ ಮಾಡಿದ್ದಾರೆ.


ಶ್ರೀ ಆಚಾರ್ಯರ ಸಮಕಾಲಿನರು:

ಶ್ರೀ ರಘುಪ್ರವೀರ ತೀರ್ಥರು , ಶ್ರೀ ವೃಂದಾವನಾಚಾರ್ಯರು, ಶ್ರೀ ವಿಶ್ವಾಧಿಶ ತೀರ್ಥರು  , ಶ್ರೀ ಸುಜನೇಂದ್ರ ತೀರ್ಥರು, ಶ್ರೀ ಸುಜ್ಞಾನೇಂದ್ರ ತೀರ್ಥರು, ಶ್ರೀ ಸುಧರ್ಮೇಂದ್ರ ತೀರ್ಥರು, ಶ್ರೀ ಸತ್ಯಪರಾಯಣ ತೀರ್ಥರು, ಶ್ರೀ ಸತ್ಯಪರಾಕ್ರಮ ತೀರ್ಥರು, ಶ್ರೀ ಸತ್ಯವೀರ ತೀರ್ಥರು, ಶ್ರೀ ಸತ್ಯಧೀರ ತೀರ್ಥರು , ಶ್ರೀ ಕಾಶಿ ರಾಘವೇಂದ್ರಾಚಾರ್ಯರು


ಆಚಾರ್ಯರ ಗುರುಭಕ್ತಿ: 

ಶ್ರೀ ಆಚಾರ್ಯರ ಕಾಲದಲ್ಲಿ ಕೆಲ ಕುಹಕಿಗಳು ಹಾಗು ಕಲಿ ಸದ್ರುಷರು ಶ್ರೀ ರಾಘವೇಂದ್ರ ತೀರ್ಥರ ಸ್ತೋತ್ರದ ಮೇಲೆ ಶಂಕೆ ಹಾಗು ಖಂಡನೆಯನ್ನು ಬರೆದಾಗ, ಶ್ರೀ ಆಚಾರ್ಯರು ಅದನ್ನು ಕೇಳಿ ತಿಳಿದ ಕೂಡಲೇ ನಿಮಿಷ ಮಾತ್ರದಲ್ಲಿ ಸರಿಯಾದ ಪ್ರತ್ಯುತ್ತರವಾಗಿ ಪ್ರತಿಖಂಡನೇಯನ್ನು  ರಚಿಸಿ ಶ್ರೀ ಗುರುಸಾರ್ವಭೌಮರ ಸ್ತೋತ್ರದ ಪ್ರಾಮಾಣ್ಯ ವನ್ನು ಸಮರ್ಥಿಸಿದರಲ್ಲದೆ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು. 


ಕೊಯಂಬತ್ತುರಿನಲ್ಲಿ ನಡೆದ ಘಟನೆ: 

ಕೊಯಂಬತ್ತುರಿನಲ್ಲಿ ಶ್ರೀ ಆಚಾರ್ಯರು ಹಾಗು ಶ್ರೀ ವೃಂದಾವನಾಚಾರ್ಯರು ಮಠದಲ್ಲಿ ತಂಗಿದರು.ಆ ಕಾಲದ ಪರ ಮಠದ ಪೀಠಾಧಿಪತಿಯೋಬ್ಬರು  ಆನೆಯ ಮೇಲೆ ಆ ಮಠದ ಮುಂದೆಯೇ ಮೆರವಣಿಗೆ ಹೊರಟಿದ್ದರು.

ಶ್ರೀಆಚಾರ್ಯರು ಪರಮಠದ ಪೀಠಾಧಿಪತಿಗಳ ಹತ್ತಿರ ಹೋಗಿ ತಮಗಿಂತ ಆಶ್ರಮ ಜೇಷ್ಠ ಜ್ಞಾನಿವರೆಣ್ಯರು ಆದ ಶ್ರೀ ವೃಂದಾವನಾಚಾರ್ಯರು ಮಠದಲ್ಲಿ ಇರುವರು ಆದ್ದರಿಂದ ಆನೆಯಮೇಲಿಂದ ಇಳಿದು ಗೌರವ ಸೂಚಿಸುವುದು ಉಚಿತ ಎಂದು ವಿನಂತಿಸಿ ಕೊಂಡರು. ಆದರೆ ಇದಕ್ಕೊಪ್ಪದ ಪರ ಮಠದವರು ಹಾಗೆಯೆ ಹೊರಡಲು ನಿಶ್ಚಯ ಮಾಡಿದರು. ಆಗ ಶ್ರೀ ಆಚಾರ್ಯರು ಆನೆಯ ಮೇಲೆ ಮುಷ್ಠಿ ಪ್ರಹಾರ ಮಾಡಿದರು. ಆ ಪ್ರಹಾರಕ್ಕೆ  ಆನೆಯು ಕೋಲಾಹಲ ಮಾಡಲಾರಂಭಿಸಿತು. ತಪ್ಪರಿತ ಪರಮಠಿಯರು  ಆ ತಕ್ಷಣ ಕೆಳಗಿ ಇಳಿದು  ಶ್ರೀ ವೃಂದಾವನಾಚಾರ್ಯರಿಗೆ ಗೌರವ ಆದರಗಳ್ಳನ್ನು ಮಾಡಿ ಅನುಗ್ರಹ ಪಡೆದು ಮೆರವಣಿಗೆ ಮುಂದುವರೆಸಿದರು.


ಆಚಾರ್ಯರ ವಾದಿ ದಿಗ್ವಿಜಯ:


ಶ್ರೀ ಆಚಾರ್ಯರು 1880ರಲ್ಲಿ ಕಾಶಿ ಕ್ಷೇತ್ರಕ್ಕೆ ಹೋಗಿ ಅಲ್ಲಿನ ಪ್ರತಿವಾದಿಗಳ ಜೊತೆ ವಾದ ಹೂಡಿ, ಅವರನ್ನು ಮೂಕೀಭೂತರನ್ನಾಗಿ ಮಾಡಿ ಅವರಿಂದ ಜಯಪತ್ರ ಪಡೆದು, ಅಲ್ಲಿನ ಕಾಶಿರಾಜನಿಂದ ಸುವರ್ಣ ಮಯವಾದ ಗಜದಂತ ಪಲ್ಲಕ್ಕಿಯನ್ನು ಮನ್ನಣೆಯಾಗಿ ಪಡೆದರು. ಆ ಪಲ್ಲಕ್ಕಿಯನ್ನು ತಮ್ಮ ಗುರುಗಳಾದ ಶ್ರೀ ವಿದ್ಯಧೀಶರಿಗೆ ಸಮರ್ಪಣೆ ಮಾಡಿದ್ದಾರೆ. ಈಗಲೂ ಪಲ್ಲಕ್ಕಿಯನ್ನು ಕೃಷ್ಣಾಪುರ ಮಠದಲ್ಲಿ ನೋಡಬಹುದು.


ಶ್ರೀ ಆಚಾರ್ಯರು ಸಿರಗುಪ್ಪ ತಾಲೂಕಿನಲ್ಲಿ ಶ್ರೀ ರಾಜರ ವೃಂದಾವನ ಹಾಗು ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಥಾಪನೆ ಮಾಡಿದ್ದಾರೆ, ಶ್ರೀ ಸೋದೆಯಲ್ಲಿ ಶ್ರೀ ಧವಳಗಂಗಾ ತೀರದಲ್ಲಿ ವೀಣಾ ಪಾಣಿ ಶ್ರೀ ಪ್ರಾಣದೇವರ ಪ್ರತಿಷ್ಥಾಪನೆ ಮಾಡಿದ್ದಾರೆ. ಜಮಖಂಡಿಯಲ್ಲಿ ಶ್ರೀ ರುಕ್ಮಿಣಿ ಸಹಿತ ಪಾಂಡುರಂಗವಿಠಲ ಹಾಗು ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಥಾಪನೆಯನ್ನು ಮಾಡಿದ್ದಾರೆ.  


 ಶ್ರೀ ಆಚಾರ್ಯರು 44 ಗ್ರಂಥಗಳನ್ನು ಮಾಧ್ವ ವಾಙ್ಮಯಕ್ಕೆ ನೀಡಿ ಅನುಗ್ರಹಿಸಿದ್ದಾರೆ. ಗ್ರಂಥಗಳ ಪಟ್ಟಿ ಹೀಗಿದೆ..

೧ ಬೃಹತಿ ಸಹಸ್ರ ವ್ಯಾಖ್ಯಾನ -  ಋಕ್ ಸಹಸ್ರ ಪದ್ಯಾರ್ಥ 

೨.  ಶ್ರೀ ವ್ಯಾಸದಾಸಸಿದ್ಧಾಂತ ಕೌಮುದೀ 

೩. ಭಾವಸೂಚನಾ 

೪. ಓಂ ಕಾರಾರ್ಥ: 

೫. ನಾರಾಯಣನಾಮಸ್ಮರಣ ನಿರೂಪಣಂ 

೬. ಬದರೀನಾರಾಯಣ ಸ್ತುತಿ:

೭.ಲಯಕ್ರಮನಿರೂಪಣಂ 

೮. ಶ್ರೀರಾಮಮುಖ್ಯಪ್ರಾಣಪ್ರಾರ್ಥನಾ

೯. ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯಟಿಪ್ಪಣಿ 

೧೦. ಶ್ರೀಮಟ್ಟಿಕಾಕೃತ್ಪೂಜ್ಯಪೂಜಿತರಾಮ ಪ್ರಾರ್ಥನಾ 

೧೧. ಶ್ರೀವಿದ್ಯಾಧಿಶಾಷ್ಟಕಂ 

೧೨. ತೀರ್ಥಪದನಿರೂಪಣಂ 

೧೩. ಶ್ರೀ ಸುಮಧ್ವವಿಜಯಸರ್ಗಾರ್ಥ: 

೧೪.ಶ್ರೀವಾದಿರಾಜಋಜುತ್ವವಿರೋಧಿಕಪೋಲಚಪೇಟಿಕಾ

 ೧೫. ಋಜುತ್ವವಿರೋಧಿ ಪರಿಮರ್ಧನಂ 

೧೬. ಕರ್ಮಾಕರ್ಮವಿವೇಕ: 

೧೭. ಅಪೂಸೂಕ್ತಾರ್ಥವಿರಯಣಂ 

೧೮. ಅತೀಗೌಪ್ಯಂ 

೧೯. ಆಧ್ಯಾತ್ಮರಸರಂಜನೀವ್ಯಾಖ್ಯಾ  

೨೦. ಶ್ರೀ ವೃಂದಾವನಾಚಾರ್ಯಸ್ತೋತ್ರಂ 

೨೧. ಶ್ರೀ ವಿಜಯದಾಸಮಹೋದಯಾನಾಂ ಸುಳಾದಿ

೨೨. ಶ್ರೀಹನೂಮತ್ಪ್ರಾರ್ಥನಾ 

೨೩. ಶ್ರೀ ವಾದಿರಾಜಕೃತಅಭಯ ಸ್ತುತಿ ವಿವರಣಂ

೨೪. ಅಪರೋಕ್ಷಜ್ಞಾನಸಾಧನಾನಿ 

೨೫. ಜ್ಞಾನಹೇತುಭಕ್ತಿಸಾಧ್ಯೋಪಾಸ್ತಿ : 

೨೬. ಯೋಗಿಋಜುಯೋಗಿಜ್ಞಾನಂ 

೨೭. ಕೇಶವಾದಿನಮನಪ್ರಕಾರ: 

೨೮. ಸಂಕ್ಷೇಪಭಾಷ್ಯವ್ಯಾಖ್ಯಾ 

೨೯. ಶ್ರೀ ಸ್ವಾಪ್ನವೃಂದಾವನ ಆಖ್ಯಾನ ಪ್ರಾಕೃತವ್ಯಾಖ್ಯಾ 

೩೦. ವಿಷ್ಣುಸಹಸ್ರನಾಮ - ಶಬ್ದಾರ್ಥ: 

೩೧. ಬ್ಯಾಡಗಿ ಹನೂಮತ್ ಸ್ತೋತ್ರಂ 

೩೨. ಶ್ರೀ ಧವಳಗಂಗಾ ಸ್ತೋತ್ರಂ 

೩೩. ಷೋಡಶಕಲಾಭಿಮಾನಿದೇವತಾ ಸ್ತೋತ್ರಂ ೩೪. ಬ್ರಹ್ಮಸೂತ್ರಾಧಿಕರಣ ಸಾರಸಂಗ್ರಹ: 

೩೫. ಶ್ರೀ ಹಯಗ್ರೀವ ವಾದಿರಾಜ ಪ್ರಾರ್ಥನಾ: 

೩೬. ಪಿತ್ರುಪಾದಸ್ತುತಿ: 

೩೭. ಶ್ರೀವಾದಿರಾಜಕೃತಸ್ತೋತ್ರವ್ಯಾಖ್ಯಾನಂ 

೩೮. ಗುರುಸ್ತೋತ್ರವಿವೃತಿಶೋಧನಂ 

೩೯. ಶ್ರೀ ವಾದಿರಾಜಪ್ರಾರ್ಥನಾ 

೪೦. ಶ್ರೀಜಯತೀರ್ಥಸ್ತೋತ್ರಂ 

೪೧. ಲಯಪ್ರಕರಣಂ 

೪೨. ಹಿತೋಪದೇಶ: 

೪೩. ಆತ್ಮವೃತ್ತಾಂತ: 

೪೪. ಭವವಿಮೋಚಕ - ಶ್ರೀ ಗುರುರಾಜ ಪ್ರಾರ್ಥನಾ.                   


ರಾಜರ ಋಜುತ್ವ ಸಮರ್ಥನೆ:

1852 ರಲ್ಲಿ ಒಬ್ಬ ಬ್ರಾಹ್ಮಣ ಸತ್ಯಮಂಗಲ ಎನ್ನುವ ಗ್ರಾಮದಲ್ಲಿ ಮೊಟ್ಟ ಮೊದಲ ಬಾರಿಗೆ ಋಜುತ್ವ ವಿರೋಧಿ ಚಟುವಟಿಕೆ ಪ್ರಾರಂಭ ಮಾಡಿದನು. ಶ್ರೀ ಬ್ರಹ್ಮಾಂಡ ಪುರಾಣದ ಕೊನೆಯ ೫ ಅಧ್ಯಾಯಗಳು ರಜತಪೀಠ ಪುರ ಮಹತ್ಮೆಗೆ ಸಂಬಂಧಿಸಿದ್ದು. ಈ ಬ್ರಾಹ್ಮಣನು ಕೊನೆಯ 3 ಅಧ್ಯಾಯಗಳನ್ನು ಬದಲು ಮಾಡಿ ಕೃತಕವಾದ ಅಧ್ಯಾಯಗಳನ್ನು ಪುರಾಣದಲ್ಲಿ ಸೇರಿಸಿ ಪ್ರಚಾರ ಮಾಡತೊಡಗಿದ, ಕ್ರಮೇಣ ಅವನ ಮಾತನ್ನು ಕೆಲ ಜನರು ನಂಬಿ ಪುಷ್ಟಿನೀಡಿದರು. 'ಆ ಅಧ್ಯಾಯಗಳಲ್ಲಿ ಶ್ರೀ ರಾಜರು ಋಜುಗಳು ಅಲ್ಲ, ಆಖ್ಯಾನ ಅಪ್ರಾಮಾಣ ಹಾಗು ಶ್ರೀ ವೃಂದಾವನಾಚಾರ್ಯರು ದೈತ್ಯರು ಎಂದು ಅಪಪ್ರಚಾರ ಮಾಡಿ,  ಪ್ರವಚನಗಳನ್ನೂ ಮಾಡಿದ. 

ಆ ಸಮಯದಲ್ಲಿ ಶ್ರೀ ರಾಜರ ಋಜುತ್ವ ಸಮರ್ಥಕರಲ್ಲಿ ಒಬ್ಬರಾದ ಶ್ರೀ ರಘುಪ್ರವೀರ ತೀರ್ಥರು ಕುಂಭಕೋಣದಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದರು. ಅಪಪ್ರಚಾರದ ವಿಷಯ ತಿಳಿದ ಕೂಡಲೇ ಮನನೊಂದು ಪ್ರಾಯೋಪವೇಶ ಮಾಡಲು ಆರಂಭಿಸಿದರು. ವಿಷಯ ತಿಳಿದ ಶ್ರೀ ಆಚಾರ್ಯರು ಆ ಕುಹಕಿ ಕಲಿಸದ್ರುಶವಾದ ಬ್ರಾಹ್ಮಣ ರಚಿಸಿದ ಕೃತಕ ಪುರಾಣವನ್ನು ತರಿಸಿ ಆ ಗ್ರಂಥಕ್ಕೆ ಖಂಡನೆ ಮಾಡುವುದಾಗಿ ಹೇಳಿ ಸರ್ವರಿಗೂ ವಾದಕ್ಕೆ ಆಹ್ವಾನ ನೀಡಿದರು, ಆದರೆ ಯಾರು ಬರಲಾಗಿ ಮರುದಿನ ಆ ಕೃತಕ ಪುರಾಣವನ್ನು ಸುಡುವುದಾಗಿ ಹೇಳಿ ಅದನ್ನು ತಡೆಯುವುದಕ್ಕೆ ಆಹ್ವಾನ ನೀಡಿ ಮಧ್ಯಾಹ್ನ ಕಾಲದಲ್ಲಿ ಕರ್ಪುರದಿಂದ ಸುಟ್ಟರು, ಆಗ ಅಲ್ಲಿ ಕೆಲ ದುಷ್ಟರು ದಂಡಪಾಣಿಗಳಾಗಿ ಆಚಾರ್ಯರನ್ನು ಹೊಡೆಯಲು ಬರಲು, ಆಚಾರ್ಯರು ತಮ್ಮ ಕೈಯನ್ನು ಪಕ್ಕದಲ್ಲಿರುವವನ ಮೇಲೆ ಇಟ್ಟು ಶ್ರೀ ಭೂತರಾಜರನ್ನು ಸ್ಮರಣೆ ಮಾಡಲು ತಕ್ಷಣ ಆ ವ್ಯಕ್ತಿ ಆ ಎಲ್ಲಾ ದಂಡಪಾಣಿಗಳನ್ನು ಹೊಡೆದೋಡಿಸಿದನು, 

ಈ ಸಮಯದಲ್ಲಿ (1895) ಪರ ಮಠದ ಪೀಠಾಧಿಪತಿಗಳೊಬ್ಬರು ಮದರಾಸಿನಲ್ಲಿ ರುಜು ವಿರೋಧಿ ಸಭಾವನ್ನು ಮಾಡಿದರು, ಆ ಸಭೆಗೆ ಹಾಗು ಆ ಬ್ರಾಹ್ಮಣನಿಗೆ ಶ್ರೀ ಸೋದೆ ಮಠದ ಮಹಾನ್ ಜ್ಞಾನಿಗಳು ಶ್ರೀ ವೃಂದಾನಾಚಾರ್ಯರ ಆಶ್ರಮ ಶಿಷ್ಯರು, ವಾದ ನಿಸ್ಸೀಮರು ಆದ ಶ್ರೀ ವಿಶ್ವಾಧಿಶರು  "ಋಜುತ್ವ ಚಂದ್ರೋದಯ" ಹಾಗು "ಶ್ರೀ ಮಧ್ವ ಉಭಯಕಥೋಜ್ಜೀವನ" ಎನ್ನುವ ಗ್ರಂಥಗಳನ್ನು, ಶ್ರೀ ಆಚಾರ್ಯರು " ಋಜುತ್ವ ಕಪೋಲಚಪೆಟಿಕಾ" ಹಾಗು "ಋಜುತ್ವ ವಿರೋಧಿ ಪರಿಮರ್ಧನ" (ಈ ಗ್ರಂಥದಲ್ಲಿ ಬಳಿತ್ಥಾಸೂಕ್ತವನ್ನು ವಾದಿರಾಜರ ಮೂರು ಅವತಾರ ರೂಪಕ್ಕೆ ಅನುವಾದ ಮಾಡಿದ್ದಾರೆ) ಎನ್ನುವ ಪ್ರತಿಖಂಡನ ಗ್ರಂಥಗಳನ್ನು ರಚಿಸಿದರು. 

ಶ್ರೀ ವಾದಿರಾಜರ ಮೃತ್ತಿಕೆ ಧಾರಣೆ ಮಾಡುವುದನ್ನು ವಿರೋಧಿಸಿ ಪರ ಮಠದವರು "ಮೃತ್ತಿಕ ಗರ್ವನಿರ್ವಾಪಣ" ಎನ್ನುವ ಗ್ರಂಥ ಬರೆದರೂ, ತಕ್ಷಣವಾಗಿ ಆಚಾರ್ಯರು "ಸನ್ಮೃತ್ತಿಕಾ ದ್ರೋಹಿ ಗರ್ವ ನಿರ್ವಾಪಣ" ಎನ್ನುವ ಪ್ರತಿಖಂಡನೆ ಬರೆದು ಶ್ರೀ ಭಾವಿಸಮೀರ ವಾದಿರಾಜರು ತಿಳಿಸಿದಂತೆ "ಅಂತೆ ಸಿದ್ಧಸ್ತು ಸಿದ್ಧಾಂತ:" ಎನ್ನುವಂತೆ ಋಜುತ್ವ ಸಮರ್ಥನೆಯನ್ನು  ಪರಿಪೂರ್ಣ ಮಾಡಿದರು. 

ಆಚಾರ್ಯರ ದಾಸಸಾಹಿತ್ಯದ ವಿಚಾರ: 

ಶ್ರೀ ಆಚಾರ್ಯರಿಗೆ ಶ್ರೀ ಕಮಲಾಪತಿವಿಠಲರು ಅಂಕಿತ ಕೊಟ್ಟಿದ್ದಾರೆ, ಶ್ರೀ ಆಚಾರ್ಯರು ಅನೇಕ ಕೃತಿಗಳನ್ನು ರಚಿಸಿದ್ದಾರೆ ಆದರೆ ಎಷ್ಟೋ ಕೃತಿಗಳು ಉಪಲಬ್ಧವಿಲ್ಲ, ಉಪಲಬ್ಧವಿರುವ ಕೆಲ ಕೃತಿಗಳನ್ನು ಮುದ್ರಿಸಲಾಗಿದೆ. ಆಚಾರ್ಯರ ಅಂಕಿತ " ಇಭವರದ ವಿಠಲ".


ಆಚಾರ್ಯರ ಶಿಷ್ಯ ಸಂಪತ್ತು: 

ಶ್ರೀ ಆಚಾರ್ಯರಿಗೆ ಶ್ರೀ ಷಟ್ಪುರಾಚಾರ್ಯರು, ಶ್ರೀ ಭೀಮಾಚಾರ್ಯರು, ಶ್ರೀ ವಾಳ್ವೆಕರ್ ಮಧ್ವಾಚಾರ್ಯರು, ಶ್ರೀ ವಾಳ್ವೆಕರ್ ವೆಂಕಣ್ಣಾಚಾರ್ಯರು ಹಾಗು ಶ್ರೀ ಅರಳಿಕಟ್ಟೆ ನರಸಿಂಹಾಚಾರ್ಯರು ಎನ್ನುವ 5 ಜನ ಶಿಷ್ಯರಿದ್ದರು.  


ಇಂತಃ ಮಹಾತಪಸ್ವಿಗಳ ಅಪರೋಕ್ಷ ಜ್ಞಾನಿಗಳ ನಿತ್ಯ ಸ್ಮರಣೆ ನಮಗಾಗಲಿ , ನಮಗೆ ಬಂದ ಎಲ್ಲಾ ದುರಿತೆಗಳು ಪರಿಹಾರಮಾಡಿ ನಿತ್ಯದಲ್ಲಿ ಮಂಗಳವನ್ನುಂಟು ಮಾಡಲಿ ಎಂದು  ಶ್ರೀ ಜಂಬುಖಂಡಿ ಅಚಾರ್ಯರಲ್ಲಿ ಪ್ರಾರ್ಥಿಸೋಣ.

Comments

Popular posts from this blog

Subrahmanya Shashti

Rathasaptami

Helavanakatte Giriyamma