Bhagawadgeeta Saara

ಶ್ರೀ ವ್ಯಾಸರಾಯರು ರಚಿಸಿದ ಭಗವದ್ಗೀತಾಸಾರ 

 ರಾಗ ರೇವತಿ 

ಕೇಳಯ್ಯ ಎನ್ನ ಮಾತ ಪಾರ್ಥನೆ ಗೀತಾದರ್ಥನೆ ॥ ಪ ॥

ಶ್ಲೋಕ

ಕುರುಕ್ಷೇತ್ರದಿ ಎನ್ನವರು ಪಾಂಡವರು ।
ಪೇಳೋ ಸಂಜಯ ಏನು ಮಾಡುವರು ಕೂಡಿ ।
ಕೇಳೈ ಅರಸನೇ ನೋಡು ಪಾಂಡವರ ಸೇನಾ ।
ಮಾತಾಡಿದ ನಿನ್ನ ಸುತಗೆ ದ್ರೋಣ ನಿಂತು ॥

ಪದ

ಕೇಳಿ ತಾ ಪಾರ್ಥನು ಕುರು ದಂಡ
ರಣದಲಿ ಚಂಡ । ಗಾಂಡೀವ ಕರದಂಡ ॥
ಅಚ್ಯುತ ಪಿಡಿರಥ ನಡೆ ಮುಂದ ನಡೆ ಮುಂದ
ಬಹು ತ್ವರದಿಂದ । ನೋಡುವೆ ನೇತ್ರದಿಂದ ॥
ಗುರುಹಿರಿಯರ ಕೂಡ ಯಾಕಂದ
ಯುದ್ಧ ಸಾಕೆಂದ । ಭಿಕ್ಷವೆ ಸುಖವೆಂದ ॥
ಕುಂತಿಸುತ ಈ ಮಾತು ಉಚಿತವಲ್ಲ
ನಿನಗಿದು ಸಲ್ಲ । ಪಿಡಿ ಗಾಂಡೀವ ಬಿಲ್ಲ ॥ 1 ॥

ಶ್ಲೋಕ

ಬಾಲ್ಯ ಯೌವನ ಮುಪ್ಪುತನ ದೇಹದಲ್ಲಿ
ಇಂಥ ದೇಹಕೆ ಮೋಹ ಮತ್ತ್ಯಾತಕಿಲ್ಲಿ ।
ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿ
ಬಿಲ್ಲು ಪಿಡಿದು ಕೀರ್ತಿ ಪಡೆ ಲೋಕದಲ್ಲಿ ॥

ಪದ

ಶಸ್ತ್ರದಂಜಿಕೆಯಿಲ್ಲ ಜೀವಕ್ಕೆ
ಈ ದೇಹಕ್ಕೆ । ಪಾವಕನ ದಾಹಕ್ಕೆ ।
ಉದಕಗಳಿಂದ ವೇದನೆ ಯಾಕೆ 
ಈ ಜೀವಕ್ಕೆ । ಮಾರುತದ ಶೋಷಕ್ಕೆ
ನಿತ್ಯ ಅಭೇದ್ಯ ತಾ ಜೀವನ
ಸನಾತನ । ವಸ್ತ್ರದ್ಹಾಂಗೆ ಈ ತನವು ।
ಆದಾವು ಪೋದಾವು ನಿನಗಯ್ಯ ।
ಅದನಾ ಬಲ್ಲೆನಯ್ಯಾ ॥ ೨ ॥

ಶ್ಲೋಕ

ಜ್ಞಾನ ದೊಡ್ಡದು ಕರ್ಮಬಂಧವ ಬಿಟ್ಟು
ಕರ್ಮ ಬಿಟ್ಟರೆ ಪ್ರತ್ಯವಾಯವಿಷ್ಟು ।
ಫಲ ಬಿಟ್ಟು ನೀ ಮಾಡು ಕರ್ಮಂಗಳ
ಸಮ ದೇಹಕೆ ಫಲ ಕರ್ಮ ಕಾರಣವಲ್ಲ ॥

ಪದ

ಕರ್ಮದಲ್ಲೆ ನಿನಗಧಿಕಾರ
ಫಲ ತಾ ದೂರ । ಧನಂಜಯಗೋಸ್ಕರ।
ಜ್ಞಾನ ದೊಡ್ಡದು ಕರ್ಮ ದೂರಯ್ಯ ।
ಇತ್ತ ಬಾರಯ್ಯ । ಯೋಗಬುದ್ಧಿ ಮಾಡಯ್ಯ ।
ಜಿತ ಬುದ್ಧಿ ಯಾವುದೈ ಕೇಶವ । ಜಗತ್ಪಾಶವ ।
ನೋಡದೇ ಪರಮೇಶ ಗೋವಿಂದನಲ್ಲಿ । ಮನವಿಟ್ಟವ ।
ಕಾಮ ಬಿಟ್ಟವ । ಜಿತ ದೇಹ ತಾನಾವ ॥ ೩ ॥

ಶ್ಲೋಕ

ಜ್ಞಾನ ದೊಡ್ಡದು ಕರ್ಮದಲ್ಲ್ಯಾಕೆ ಎನ್ನ
ಬುದ್ಧಿ ಮೋಹಿಸಿ ಕೃಷ್ಣ ಕೇಳಯ್ಯ ಬಿನ್ನ ॥
ಕರ್ಮವಿಲ್ಲದೆ ಮೋಕ್ಷ ಫಲವುಂಟೆ ಇನ್ನ
ಕರ್ಮ ಮೋಕ್ಷದ ಬುದ್ಧಿಗೆ ಬೀಜವಲ್ಲೆ ॥

ಪದ

ಯುದ್ಧ ಧರ್ಮವ ಮಾಡೋ ಪಾಂಡವ
ರಣ ತಾಂಡವ । ವೈರ ಷಂಡನೆಂಬುವ ।
ಜನರೆಲ್ಲ ಮಾಳ್ಪರೋ ನಿನ್ನ ನೋಡಿ
ಮತ್ತೇನ ನೋಡಿ । ನೋಡಿದರ ನೀ ಬೇಡಿ ।
ಎನಗ್ಯಾಕೆ ಪೇಳಯ್ಯ ಜನ ಕರ್ಮ
ಕ್ಷತ್ರಿಯ ಧರ್ಮ । ನಷ್ಟವಾಗುವದು ಧರ್ಮ  ।
ಅರ್ಪಿಸು ಎನ್ನಲ್ಲಿ ಸರ್ವವು
ಬಿಟ್ಟು ಗರ್ವವು । ತಿಳಿ ಎನ್ನೊಳು ಸರ್ವವು ॥ ೪ ॥

ಶ್ಲೋಕ

ಯೋಗ ಸನ್ಯಾಸವೆರಡು ಮುಕ್ತಿಗೆ ಧೃಡವು
ಭೋಗ ವರ್ಜಿತ ಕೇಳು ಸನ್ಯಾಸಿಯಿರವು ।
ಹ್ಯಾಗೆ ಪದ್ಮಕೆ ವಾರಿಯ ಲೇಪವಿಲ್ಲ
ಹಾಗೆ ಭಕ್ತಿಗೆ ಸಂಸ್ಕೃತಿಯು ಇಲ್ಲ ॥

ಪದ

ಅಜನಲ್ಲಿ ದ್ವಿಜನಲ್ಲಿ ಗಜದಲ್ಲಿ
ಸಮ ನಾನಲ್ಲಿ । ಭಜಿಪರ ಮನದಲ್ಲಿ
ಮನಸು ಯಾರ ಜೀವಕೆ ಬಂದು
ಇತ್ತ ಬಾರೆಂದು । ಮತ್ತೆ ವೈರಿ ದಾರೆಂದು ।
ಲೋಷ್ಟಕಾಂಚನ ನೋಡು ಸಮ ಮಾಡಿ ।
ಆಸನ ಹೂಡಿ । ನಾಶಿಕ ತುದಿ ನೋಡಿ । ಧ್ಯಾನ ಮಾಡು 
ಹರಿ ಅಲ್ಲಿಹ ಅವನಲ್ಲಿಹ । ಯೋಗ ಸನ್ನಿಹಿತನವನೇ ॥ ೫ ॥

ಶ್ಲೋಕ

ಯಾರ ಭಕ್ತಿಯು ಎನ್ನ ಪಾದಾಬ್ಜದಲ್ಲಿ
ಘೋರ ಸಂಸಾರ ಯಾತನೆ ಅವರಿಗಿಲ್ಲ ।
ಶರೀರವೆ ಕ್ಷೇತ್ರವೆಂದು ತಿಳಿಯೋ ।
ಮರೆಯದೆ ಕ್ಷೇತ್ರಜ್ಞನೆಂದೆನ್ನ ತಿಳಿಯೋ ॥

ಪದ

ಶರೀರದೊಳಗಿದ್ದು ಪಾಪಿಲ್ಲ ದುಃಖ ಲೇಪಿಲ್ಲ ।
ಆಕಾಶವು ಎಲ್ಲಾ । ಯಾತರಿಂದ್ಹುಟ್ಟಿತ್ತು ಈ ಗುಣ ।
ಮೂರು ಸದ್ಗುಣ । ಕೇಳೈಯ್ಯ ಫಲ್ಗುಣ ।
ಸುಖ ದುಃಖ ಸಮ ಮಾಡಿ ನೋಡು ನೀ ।
ಈಡ್ಯಾಡು ನೀ । ಬ್ರಹ್ಮನ ನೋಡೋ ನೀ ।
ಚಂದ್ರ ಸೂರ್ಯರ ತೇಜ ನನದಯ್ಯ
ಗುಡಾಕೇಶಯ್ಯ । ಅನ್ನಪಚನವೆನದಯ್ಯ ॥ ೬ ॥

ಶ್ಲೋಕ

ನಾನೇ ಉತ್ತಮ ಮನಸು ಎನ್ನಲ್ಲಿ ಮಾಡೋ
ಜ್ಞಾನ ಅಜ್ಞಾನ ಪೇಳುವೆ ತಿಳಿದು ನೋಡೋ
ಜ್ಞಾನ ದುರ್ಲಭ ಅವರ ಭಕ್ತಿಗಳಂತೆ
ನಾನು ಕೊಡುವೆನು ಫಲವ ಮನಸು ಬಂದಂತೆ ॥

ಪದ

ಸ್ಮರಣೆ ಮಾಡುತ ದೇಹ ಬಿಡುವರೋ
ಎನ್ನ ಪಡೆವರೋ । ಬಲು ಭಕ್ತಿ ಮಾಡುವರೋ ।
ಅನಂತ ಚೇತನ ಸುಳಿವೆನು
ಹರಿ ಸುಲಭನು । ಮತ್ತೆ ಜನನವಿಲ್ಲವಗೆ ।
ಎನ್ನ ಭಕ್ತರಿಗಿಲ್ಲ ನಾಶವು
ಸ್ವರ್ಗದಾಶವು । ಬಿಟ್ಟು ಚರಣ ಭಕುತಿಯ ॥ ೭ ॥

ಶ್ಲೋಕ

ಕೃಷ್ಣ ತೋರಿಸು ನಿನ್ನ ವಿಭೂತಿ ರೂಪ ।
ಇಷ್ಟ ಪೂರುತಿಯಾಗಲೊ ಎನಗೆ ಶ್ರೀಪ ।
ರಾಮ ನಾನಯ್ಯ ರಾಜರ ಗುಂಪಿನಲ್ಲಿ
ಸೋಮ ನಾನಯ್ಯ ತಾರಕ ಮಂಡಲದಲ್ಲೀ ॥

ಪದ

ಅಕ್ಷರದೊಳಗೆ ಅಕಾರನು ಗುಣಸಾಗರನು ।
ಪಕ್ಷಿಗಳಲಿ ನಾನು ಗರುಡನು । ಸಕಲ ಜಾತಿಗಳಲ್ಲಿ
ಶ್ರೇಷ್ಟತನದಲಿ । ಎನ್ನ ರೂಪ ತಿಳಿಯಲ್ಲಿ ।
ತೋರಿಸೋ ಕೃಷ್ಣ ನಿನ್ನ ರೂಪ ।
ನಾನಾ ರೂಪ । ಅರ್ಜುನ ನೋಡೋ ರೂಪ ।
ಕಂಡನು ತನ್ನನು ಸಹಿತದಿ ।
ಹರಿ ದೇಹದಿ । ಬ್ರಹ್ಮಾಂಡಗಳಲ್ಲಿ ॥ ೮ ॥

ಶ್ಲೋಕ

ಕ್ಷರ ಅಕ್ಷರ ಎರಡಕ್ಕೂ ಉತ್ತಮನು ।
ಘೋರ ನರಕಕ್ಕೆ ಲೋಭ ಕಾಮನು ನಾನು ।
ಸಾರ ದಾನವು ಸಜ್ಜನರ ಹಸ್ತದಲ್ಲಿ
ಭೂರಿ ದಕ್ಷಿಣೆ ನೀಡೋ ಸತ್ಪಾತ್ರರಲ್ಲಿ ॥

ಪದ

ಸರ್ವ ದಾನಕಿಂತ ಎನಭಕ್ತಿ
ಕೇಳೊ ಭೂಶಕ್ತಿ । ಮಾಡಯ್ಯ ವಿರಕ್ತಿ ।
ಕೃಷ್ಣ ಹರಣವಾಯ್ತು ನಿನ್ನಿಂದ
ಮೋಹ ಎನ್ನಿಂದ । ಬಹು ಸುವಾಕ್ಯದಿಂದ ।
ಕೃಷ್ಣ ಭೀಮಾನುಜರ ಸಂವಾದ
ಮಹ ಸುಖಪ್ರದ । ಧೃತರಾಷ್ಟ್ರ ಕೇಳಿದ ।
ಬಲ್ಲೆನು ವ್ಯಾಸರ ದಯದಿಂದ ।
ಮನಸಿನಿಂದ । ಕೃಷ್ಣ ನಲ್ಲೇ ಜಯವೆಂದ ॥ ೯ ॥

॥ ಶ್ರೀವ್ಯಾಸರಾಯವಿರಚಿತ ಭಗವದ್ಗೀತಾಸಾರವು ಸಮಾಪ್ತವಾಯಿತು ॥

Comments

Popular posts from this blog

Subrahmanya Shashti

Rathasaptami

Helavanakatte Giriyamma