Vadirajara Suladi

 ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀ ವಾದಿರಾಜರ ಸ್ತೋತ್ರ ಸುಳಾದಿ 

 ರಾಗ ಮಧುವಂತಿ 

 ಧ್ರುವತಾಳ 

ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ
ಸಾಧು ಸನ್ಮುನಿವರ್ಯ ಸಮ್ಮೋದತೀರ್ಥರ ಪಾದ
ಸಾದರದಿಂದ ಭಜಿಸಿ ಮೇದಿನಿಗೆ ಭಾರ -
ವಾದ ಮಾಯಾವಾದಿಗಳ ಗೆದ್ದ
ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ
ಮಾಧವ ವೇದವೇದ್ಯ ವಿಜಯವಿಟ್ಠಲ ತಾನು
ಆದರದಿಂದವರ ಭುಜದಿ ಹಯವಕ್ತ್ರನಾಗಿ
ಪಾದವನ್ನು ಇಟ್ಟು ಸ್ವಾದುವಾದ ಕಡಲಿ ಹೂರಣವನು ಉಂಡ
ಶ್ರೀಧರನ ಮಹಿಮೆ ಸಾಧುಜನರು ಕೇಳಿ ॥ 1 ॥ 

 ಮಟ್ಟತಾಳ 

ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ
ಮೃಡನುತ ಗೋವಿಂದ ಜಡಿಥದ್ಹರಿವಾಣದಲ್ಲಿ
ಕಡಲಿ ಸಕ್ಕರೆ ಬೆರೆಸಿ ಲಡ್ಡುಗೆಯ ಮಾಡಿದ
ಸಡಗರದ ಭಕ್ಷ ಪಾಯಸ ಘೃತ ನೀಡೆ
ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು
ಕಡಗೋಲು ನೇಣು ಪಿಡಿದುಡುಪಿಲಿನಿಂದ
ಉಡುರಾಜಮುಖ ನಮ್ಮ ವಿಜಯವಿಟ್ಠಲನು 
ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ॥ 2 ॥ 

 ತ್ರಿವಿಡಿತಾಳ 

ತಾಮಸ ಗುಣವುಳ್ಳ ಪಾಮರ ಜನರಿಗೆ
ಈ ಮಹಿಮೆ ದೊರಕುವದೇ ಸ್ವಾಮಿ ಸಿಲಕುವನೆ
ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ -
ಧಾಮ ದೊರಿಯದು ಭೂಮಿಯೊಳಗಿದ್ದ ಭ್ರಾಮಕ ಜನರಿಗೆ 
ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ
ಕಾಮಾರಿ ವಂದ್ಯ ನಮ್ಮ ವಿಜಯವಿಟ್ಠಲನು 
ಸಾಮಾನ್ಯ ಜನರಿಗೆ ದೊರಕುವನೇ ಕೇಳಿ ॥ 3 ॥ 

 ಅಟ್ಟತಾಳ 

ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿ -
ಗ್ವಿಜಯ ಮಾಡಲು ಪುರಕೆ 
ನಿಜ ಸುಜ್ಞಾನ ಪೂರ್ಣಪ್ರಜ್ಞರೆಂಬೋ ಮುನಿಯು
ಅಜನ ಪದಕೆ ಬಂದು ಅಖಿಳರನಾಳಿದಾ
ನಿಜ ವಾಯು ಹನುಮ ಭೀಮ ಮಧ್ವನೆನಿಸಿದ
ವಿಜಯಸಾರಥಿ ಪಾದರಜದ ಮಹಾತ್ಮೆಯಿಂದ
ಗಜವೈರಿ ಭಂಜನ ವಿಜಯವಿಟ್ಠಲನ್ನ 
ಭಜನಿಯ ಗೈಯುತ ಬಹುಕಾಲದಿ
ಋಜುಗಣ ಪಂಕ್ತಿಯೊಳಗೆ ಕುಳಿತಾ
ನಿಜ ನಿರ್ಮಲ ಸುಜ್ಞಾನ ಧ್ಯಾನದಿಂದ 
ಜ್ಞಾನಪಕ್ವಾದ ಮನವುಳ್ಳ
ಸುಜನ ಶಿರೋಮಣಿ ವಾದಿರಾಜನು ತಾ
ನಿಜವಾಗಿ ಬೊಮ್ಮಾಂಡ ಪುರಾಣ ಸಾಧಕದಿಂದ
ಅಜಪದಕೆ ಸಲ್ವನು ಲೇಶ ಸಂಶಯಬೇಡಿ
ನಿಜ ನಿಜ ನಿಜವೆಂದು ನಿತ್ಯ ಕೊಂಡಾಡಿರೋ ॥ 4 ॥ 

 ಆದಿತಾಳ 

ಮನ ಶುದ್ಧರಾಗಿ ಮಾಧವನಂಘ್ರಿಯನು
ದಿನ ದಿನದಲ್ಲಿ ನಂಬಿ ಕೊಂಡಿಪ್ಪರೆ
ಅನವರತಾನಂದ ಗುರು ಮಧ್ವರಾಯರ ದಿವ್ಯ -
ವನಜಪಾದಂಗಳ ಸ್ಮರಿಸಲು
ಹನುಮೇಶ ನಮ್ಮ ಸಿರಿ ವಿಜಯವಿಟ್ಠಲ ತಾನು
ಮುನಿ ವಾದಿರಾಜರ ಸಾಮಾನ್ಯರೆಂತೆಂದು
ಎಣಿಸಿದವರನ್ನು ಘನವಾಗಿ ಶಿಕ್ಷಿಪ
ಇನತನುಜೋಧ್ಬವ ಕೋಪದಿಂದ
ವಾದಿರಾಜರ ಮಹಿಮೆಯನು ಕೊಂಡಾಡಿ 
ಅನುದಿನ ಸುಜನರು ॥ 5 ॥ 

 ಜತೆ 

ಮೋದತೀರ್ಥರ ಮತ ಸೇನಾಧಿಪತಿಯಾದ
ವಾದಿರಾಜ ಮುನಿಯು ವಿಜಯವಿಟ್ಠಲ ದಾಸಾ ॥

Comments

Popular posts from this blog

Subrahmanya Shashti

Rathasaptami

Helavanakatte Giriyamma