Purandara Dasara Ugabhogagalu
ಶ್ರೀ ಪುರಂದರದಾಸರ ಉಗಾಭೋಗಗಳು.
ಭಗವಂತನ ಅರಿವು ಜಗತ್ತಿನ ಬಗ್ಗೆ ಒಲವನ್ನು ಹುಟ್ಟಿಸಿ, ಚೈತನ್ಯದ ಬಲವನ್ನು ಹೆಚ್ಚಿಸುತ್ತದೆ. ದಿನನಿತ್ಯ
ಉಗಾ ಭೋಗಗಳ ಅಭ್ಯಾಸದಿಂದ ಎಂತಹ ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತನೆ ಮಾಡುವ ಅತೀಂದ್ರಿಯ
ವಾದ ಶಕ್ತಿ ಇದೆ. ಸುಳಾದಿಗಳಿಗಿರುವಂತೆ ಇವುಗಳಿಗೆ ತಾಳದ ನಿರ್ಬಂಧವಿಲ್ಲ. ಪಲ್ಲವಿ, ಅನುಪಲ್ಲವಿ ಗಳಾಗಲಿ,
ಭಿನ್ನ ಭಿನ್ನ ನುಡಿಗಳಾಗಲಿ ಇವುಗಳಲ್ಲಿ ಇರುವುದಿಲ್ಲ. ಮರಾಠಿಯ ಅಭಂಗಗಳು, ಓವಿಗಳು, ಸಂಸ್ಕೃತದ ಆರ್ಯಾಗಳು, ದಂಡಿಗಳು, ಉಗಾಭೋಗಕ್ಕೆ ಸ್ಫೂರ್ತಿಯಾಗಿರಬಹುದೆಂದು ಕೆಲವರ ಊಹೆ.
ಈಗ ನೋಡೋಣ ಕೆಲವು ಉಗಾಭೋಗಗಳು..
ಸ್ತ್ರೀಯರಿಗೆ ಪುರುಷರ ಮೋಹಿಸುವರಲ್ಲದೆ l
ಪುರುಷರಿಗೆ ಪುರುಷರು ಮೋಹಿಸುವದೆಂತೋ l
ಹರಿ ಪರಮಪುರುಷ ಪುರುಷೋತ್ತಮ l
ಪುರುಷ ಬ್ರಹ್ಮಾದಿಗಳು ನಿನಗೆ ಮೋಹಿಸುವರೈ l
ತಿರುವೆಂಗಳಪ್ಪ ಸಿರಿ ಪುರಂದರ ವಿಠಲರೇಯ l
ಧರೆಯೊಳು ನೀನು ಮೋಹನ ರೂಪ ಕಾಣೋ l
ಹರಿ ಪರಮಪುರುಷ ಪುರುಷೋತ್ತಮ ll
ಇಂದಿಗೆಂಬ ಚಿಂತೆ ನಾಳೆಗೆಂಬಾ ಚಿಂತೆ l
ನಾಡಿದಿಗೆಂಬಾ ಚಿಂತೆ ತೊತ್ತಿಗೇಕಯ್ಯ l
ಒಡೆಯನುಳ್ಳ ತನಕ ತೊತ್ತಿಗ್ಯಾತರ ಚಿಂತೆ l
ಅಡಿಗಡಿಗೆ ನಮ್ಮನಾಳುವ ಕಾವ ಚಿಂತೆಯವ
ನೊಡೆಯ ಪುರಂದರ ವಿಠಲರಾಯನಿರುತಿರೆ l
ಒಡೆಯನುಳ್ಳ ತುತ್ತಿಗ್ಯಾತರ ಚಿಂತೆ ll
ನಿನ್ನಡೆ ಇಳೆಯ ನೀರಡಿ ಮಾಡಿತು l
ನಿನ್ನ ಉಂಗುರ ಬ್ರಹ್ಮಾಂಡವನೊಡೆಯಿತು l
ನಿನ್ನ ಉಗುರು ಸುರನದಿಯನೇ ತಂದಿತು l
ನಿನ್ನ ಕರ ಮಧುಕೈಟಭರನೊರೆಸಿತು l
ನಿನ್ನ ಸಿರಿ ತೋಳು ಶೀಲಕುಮಿಯನಪ್ಪಿತು l
ನಿನ್ನ ಪಾದದ ನೆನೆಹೆ ಸಕಲ ಸಂಪದವೋ ಪುರಂದರವಿಠಲ ll
ಅರ್ಭಕನ ತೊದಲ್ನುಡಿ ತಾಯ್ತಂದೆ ಕೇಳಿ ಮನ
ಉಬ್ಬಿ ನಲಿವಂದದಲಿ ಉರಗಶಯನ l
ಕೊಬ್ಬಿ ನಾನಾಡಿದರು ತಾಳಿ ರಕ್ಷಿಸು ಎನ್ನ l
ಕಬ್ಬು ಬಿಲ್ಲನ ಪಿತ ಪುರಂದರ ವಿಠಲ ll
ಸಿರಿ ವಿರಿಂಚಾದಿಗಳು ಅರಿಯದಿಹ ಮಹಿಮೆ
ಅರಿತು ಪಾಡಲು ಜಗದಿ ಅರಹರಾರಯ್ಯ
ಅರವಿಂದದಳನಯನ ಶರಣೆಂದವರ ಕಾವ
ಕರುಣಾಸಾಗರ ನಮ್ಮ ಪುರಂದರವಿಠಲ llಒಂದು ಕಾಲದಲ್ಲಿ ಆನೆ-ಕುದುರೆ ಮೇಲ್ಮೆರೆಸುವಿ |
ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವಿ |
ಒಂದು ಕಾಲದಲ್ಲಿ ಮೃಷ್ಟಾನ್ನ ಉಣಿಸುವಿ |
ಒಂದು ಕಾಲದಲ್ಲಿ ಉಪವಾಸವಿರಿಸುವಿ |
ನಿನ್ನ ಮಹಿಮೆಯನು ನೀನೇ ಬಲ್ಲೆಯೋ |
ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವಿ |
ಒಂದು ಕಾಲದಲ್ಲಿ ಮೃಷ್ಟಾನ್ನ ಉಣಿಸುವಿ |
ಒಂದು ಕಾಲದಲ್ಲಿ ಉಪವಾಸವಿರಿಸುವಿ |
ನಿನ್ನ ಮಹಿಮೆಯನು ನೀನೇ ಬಲ್ಲೆಯೋ |
ಪನ್ನಂಗಶಯನ ಶ್ರೀ ಪುರಂದರವಿಠಲ ||
Comments
Post a Comment